ADVERTISEMENT

ಸಂಸದರ ನಡೆ ಪಂಚಾಯಿತಿ ಕಡೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 4:17 IST
Last Updated 25 ನವೆಂಬರ್ 2022, 4:17 IST

ಕೋಲಾರ: ‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಸಂಸದರ ನಡೆ ಪಂಚಾಯಿತಿ ಕಡೆಎಂಬ ವಿನೂತನ ಕಾರ್ಯಕ್ರಮವನ್ನು ಜಿಲ್ಲೆಯ ಪ್ರತಿ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮೊದಲ ಬಾರಿ ಕೋಲಾರಜಿಲ್ಲೆಯಲ್ಲಿ ಇಂಥ ಪ್ರಯೋಗ ಮಾಡಲಾಗುತ್ತಿದೆ. ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟಂತೆ ಫಲಾನುಭವಿಗಳ ಸಭೆ ನಡೆಸಲಾಗುವುದು. ಕಾಮಗಾರಿಗಳ ಮಾಹಿತಿ ಪಡೆಯಲಾಗುವುದು. ಕೇಂದ್ರ, ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದರು.

‘ಹೀಗಾಗಿ, ಕಾರ್ಯಕ್ರಮಕ್ಕೆ ಸಜ್ಜಾಗಲು ಒಂದು ವಾರ ಅಧಿಕಾರಿಗಳಿಗೆ ಸಮಯಾವಕಾಶ ನೀಡಿದ್ದೇನೆ. ಮಾಲೂರು ತಾಲ್ಲೂಕಿನಿಂದಲೇ ಸಂಸದರ ನಡೆ ಪಂಚಾಯಿತಿ ಕಡೆ ಆರಂಭಿಸಲಾಗುವುದು. ದಿನಕ್ಕೆ ನಾಲ್ಕರಂತೆ 154 ಪಂಚಾಯಿತಿಗಳಿಗೆಹೋಗಿ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲೆಯ ಆರೂ ತಾಲ್ಲೂಕುಗಳಿಗೆ ಹೋಗುತ್ತೇನೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ಇಲಾಖೆಯಲ್ಲಿ ನಡೆದಿರುವ ಕಾಮಗಾರಿಗಳು ಹಾಗೂ ಪಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ‌ಪಲಾನುಭವಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡಬೇಕು. ಇಲಾಖೆಗಳ ಪ್ರಗತಿ ವರದಿಗಳನ್ನು ಕನ್ನಡದಲ್ಲಿ ಕೊಡಬೇಕು’ ಎಂದು ಸೂಚಿಸಿದರು. ‘ಆ ಬಳಿಕ ನಗರಸಭೆ ಹಾಗೂ ಪುರಸಭೆಗಳಿಗೆ ಭೇಟಿ ನೀಡಿ ವಾರ್ಡ್‌ಗಳಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.