ADVERTISEMENT

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಸಂಸದ ಮುನಿಸ್ವಾಮಿ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:38 IST
Last Updated 29 ಜನವರಿ 2023, 6:38 IST
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟು ರಾಜೇಂದ್ರಕುಮಾರ್ ಅವರು ಕ್ರೀಡಾಜ್ಯೋತಿಯನ್ನು ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಮಂಜುನಾಥ್‌, ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌ ಕುಮಾರ್‌, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಶಶಿಕಲಾ ಇದ್ದಾರೆ
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟು ರಾಜೇಂದ್ರಕುಮಾರ್ ಅವರು ಕ್ರೀಡಾಜ್ಯೋತಿಯನ್ನು ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಮಂಜುನಾಥ್‌, ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌ ಕುಮಾರ್‌, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಶಶಿಕಲಾ ಇದ್ದಾರೆ   

ಕೋಲಾರ: ‘ಜಿಲ್ಲೆಯಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಂತಹ ಅಭಿವೃದ್ಧಿ ಚಟುವಟಿಕೆಗಳಿಗೆ ಜಿಲ್ಲೆಯ ಸರ್ಕಾರಿ ನೌಕರರ ಸಹಕಾರ ಅಗತ್ಯವಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಜಿಲ್ಲಾ ಸರ್ಕಾರಿ ನೌಕರರರ ಕ್ರಿಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಶನಿವಾರ ಚಾಲನೆ ಅವರು ಮಾತನಾಡಿದರು.

‘ಕ್ರೀಡಾ ಹಾಸ್ಟೆಲ್ ನಿರ್ಮಿಸಲು ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಅವರು ಸಮ್ಮತಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಮಂಜೂರಾಗುವ ಭರವಸೆ ಇದೆ. ಈಗಾಗಲೇ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಒತ್ತು ನೀಡಿದ್ದು, ₹ 8.75 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ’ ಎಂದರು.

ADVERTISEMENT

‘ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ, ವ್ಯಾಯಾಮ ಅಗತ್ಯ’ ಎಂದು ತಿಳಿಸಿದರು.

‘ಕೋವಿಡ್ ಸಂದರ್ಭದಲ್ಲಿ ಸೈನಿಕರಂತೆ ಕೆಲಸ ಮಾಡಿದ್ದೀರಿ. ಹುದ್ದೆಗಳ ಕೊರತೆ, ಒತ್ತಡದ ನಡುವೆಯೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೀರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಜನರಿಗೆ ತಲುಪಿಸಿ, ಕಚೇರಿಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸನಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಹಿಂದೆ ವಾಲಿಬಾಲ್ ಕ್ರೀಡೆಯಲ್ಲಿ ಕೋಲಾರ ಜಿಲ್ಲೆ ಮುಂಚೂಣಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಹಿಂದಿನ ಕ್ರೀಡಾ ವೈಭವ ಮರುಕಳಿಸುವಂತಾಗಬೇಕು’ ಎಂದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ ಬಾಬು, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಬಂದವರಿಗೆ ಸಂಸದರು ಟ್ರ್ಯಾಕ್‌ ಸೂಟ್, ಶೂ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ ರಾಜೇಂದ್ರಕುಮಾರ್ ಮತ್ತು ತಂಡದವರು ಕ್ರೀಡಾಜ್ಯೋತಿ ತಂದು ಸಂಸದರಿಗೆ ಹಸ್ತಂತರಿಸಿದರು. ಮಧ್ಯಾಹ್ನ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಭೇಟಿ ನೀಡಿ ಕ್ರೀಡಾಕೂಟ ವೀಕ್ಷಿಸಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಅಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ, ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಸಂಘದ ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಸಂಘದ ಸಹಕಾರ್ಯದರ್ಶಿಗಳಾದ ವಿಜಯಮ್ಮ, ಎನ್.ಎಸ್.ಭಾಗ್ಯ, ಪ್ರೇಮಾ, ಚಂದ್ರಕಲಾ ಇದ್ದರು. ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು, ನೌಕರರ ಪಥಸಂಚಲನದ ಬ್ಯಾಂಡ್‍ಸೆಟ್ ನುಡಿಸಿದರು.

ಮುಖಂಡರಾದ ಬಾಲಾಜಿ, ಜಾಮೀನುಲ್ಲಾಖಾನ್, ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ನಂದೀಶ್, ಉಪಾಧ್ಯಕ್ಷ ರತ್ನಪ್ಪ, ಖಜಾಂಚಿ ವಿಜಯ್, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ತಾಲ್ಲೂಕು ಅಧ್ಯಕ್ಷರಾದ ನರಸಿಂಹಮೂರ್ತಿ, ಮುನೇಗೌಡ, ಬಂಗವಾದಿ ನಾಗರಾಜ್, ಅಪ್ಪೇಗೌಡ, ಅರವಿಂದ್, ವಿವಿಧ ವೃಂದ ಸಂಘಗಳ ಟಿ.ಕೆ.ನಟರಾಜ್, ಅಶ್ವಥ್ಥನಾರಾಯಣಗೌಡ, ನರಸಿಂಹ,ಆಂಜನೇಯಗೌಡ, ವಿನೋದ್‍ಬಾಬು, ವೆಂಕಟಗಿರಿಯಪ್ಪ, ಬೈಯ್ಯಾರೆಡ್ಡಿ, ವಿ.ಮುರಳಿಮೋಹನ್, ನರಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.