ADVERTISEMENT

ಸಂಸದ ಮುನಿಸ್ವಾಮಿ ನಂಬಿಕೆಗೆ ಅರ್ಹರಲ್ಲ: ಶಾಸಕ ಶ್ರೀನಿವಾಸಗೌಡ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:09 IST
Last Updated 3 ಆಗಸ್ಟ್ 2020, 14:09 IST
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಸೋಮವಾರ ಬಡ ಜನರ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಸೋಮವಾರ ಬಡ ಜನರ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿದರು.   

ಕೋಲಾರ: ‘ಸಂಸದ ಎಸ್.ಮುನಿಸ್ವಾಮಿ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ. ನಾವು ಅವರ ಮೇಲಿಟ್ಟಿದ್ದ ನಂಬಿಕೆಯು ನೀರಿನಲ್ಲಿ ಹೋಮ ಮಾಡಿದಂತಾಯಿತು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ಅನಾರೋಗ್ಯಪೀಡಿತ ಬಡ ಜನರ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುವ ಒಂದೇ ಉದ್ದೇಶಕ್ಕೆ ಮುನಿಸ್ವಾಮಿ ಅವರನ್ನು ಗೆಲ್ಲಿಸಬೇಕಾಯಿತು’ ಎಂದು ಹೇಳಿದರು.

‘ಮುನಿಯಪ್ಪ ಅವರನ್ನು ಹಿಂದೆಯೇ ಸೋಲಿಸುವ ಅವಕಾಶ ಸಿಕ್ಕಿತ್ತು. ಆಗ ನಾನು ಮತ್ತು ಕೃಷ್ಣ ಬೈರೇಗೌಡರು ಅವರ ಬೆನ್ನಿಗೆ ನಿಂತು ಗೆಲ್ಲಿಸಿದ್ದೆವು. ಆದರೆ, ಮುನಿಯಪ್ಪ ನಮಗೆ ಸಾಕಷ್ಟು ತೊಂದರೆ ಕೊಟ್ಟರು. ಸಂಸದ ಮುನಿಸ್ವಾಮಿ ಅವರನ್ನು ನೋಡಿದರೆ ಮುನಿಯಪ್ಪ ಅವರಿಗಿಂತ ಅಪಾಯಕಾರಿ’ ಎಂದು ಕಿಡಿಕಾರಿದರು.

ADVERTISEMENT

‘ಜಿಲ್ಲೆಯಲ್ಲಿ 3 ಲಕ್ಷ ಮಂದಿ ಬಲಗೈ ಜನಾಂಗದ ಮತದಾರರಿದ್ದಾರೆ. ಆದರೆ, ಎಡಗೈ ಜನಾಂಗದ ಮತದಾರರ ಸಂಖ್ಯೆ ಕೇವಲ 50 ಸಾವಿರವಿದೆ. ಎಡಗೈ ಜನಾಂಗದ ಗುಂಪಿಗೆ ಸೇರಿದ ಮುನಿಯಪ್ಪ 30 ವರ್ಷ ಸಂಸದರಾಗಿದ್ದರೂ ಸಾಮಾಜಿಕ ನ್ಯಾಯ ನೀಡಲಿಲ್ಲ. ಈ ಕಾರಣಕ್ಕಾಗಿ ಬಲಗೈ ಗುಂಪಿಗೆ ಸೇರಿದವರಿಗೆ ಅವಕಾಶ ಮಾಡಿಕೊಡಲಾಯಿತು’ ಎಂದರು.

‘ಸಂಸದರು ಎಪಿಎಂಸಿ ವಿಚಾರದಲ್ಲಿ ಸಹಕಾರ ನೀಡಲಿಲ್ಲ. ನಮ್ಮ ವಿರುದ್ಧವೇ ರಾಜಕಾರಣ ಮಾಡಿ ತಮಗೆ ಬೇಕಾದವರನ್ನು ಎಪಿಎಂಸಿಗೆ ನಿರ್ದೇಶಕರಾಗಿ ನೇಮಿಸಿಕೊಂಡಿದ್ದಾರೆ. ಮುನಿಸ್ವಾಮಿ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆ ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅವರಿಗೆ ಸೋಲು ನಿಶ್ಚಿತ’ ಎಂದು ಲೇವಡಿ ಮಾಡಿದರು.

ಉತ್ತಮ ಮಳೆ: ‘ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು. ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕೆರೆ ಕುಂಟೆಗಳಿಗೆ ನೀರು ಹರಿದು ಬರುತ್ತಿದ್ದು, ಈಗಾಗಲೇ ಹಲವು ಕೆರೆಗಳು ತುಂಬಿವೆ. 10 ವರ್ಷಗಳಿಂದ ಮಳೆಯ ಬಿತ್ತನೆ ಸಂದರ್ಭದಲ್ಲೇ ಕೈಕೊಟ್ಟಿತ್ತು. ಹಿಂದಿನ ವರ್ಷ ಉತ್ತಮ ಬೆಳೆ ಆಗಿರಲಿಲ್ಲ. ಈ ವರ್ಷ ಉತ್ತಮ ಮಳೆ ಆಗುತ್ತಿರುವುದರಿಂದ ಶುಭ ಸೂಚನೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಬಂಗಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಯರಗೋಳ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ನಿರೀಕ್ಷೆಯಿದೆ. ಡ್ಯಾಂನಲ್ಲಿ ನೀರು ಸಂಗ್ರಹವಾದರೆ ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಯರಗೋಳ್‌ ಯೋಜನೆ ನಂಬಿಕೊಂಡು ಹಲವೆಡೆ ಕುಡಿಯುವ ನೀರು ಸರಬರಾಜಿಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಯೋಜನೆ ಕಾಮಗಾರಿ ಪೂರ್ಣಗೊಂಡರೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.