ADVERTISEMENT

ಸಂಸದ ಮುನಿಯಪ್ಪ ಗುಳ್ಳೆ ನರಿ: ಬಾಲಾಜಿ ಚನ್ನಯ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:58 IST
Last Updated 16 ಏಪ್ರಿಲ್ 2019, 13:58 IST

ಕೋಲಾರ: ‘ಕ್ಷೇತ್ರದಲ್ಲಿ ಶಕುನಿಯಂತೆ ಠಿಕಾಣಿ ಹೂಡಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಜನ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಯಪ್ಪ ಗುಳ್ಳೆ ನರಿ ಇದ್ದಂತೆ. ಅವರು ಸಂಸದರಾದ ದಿನದಿಂದ ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ರಾಜಕಾರಣಿಯನ್ನು ರಾಜಕೀಯವಾಗಿ ಮುಗಿಸುತ್ತಾ ಬಂದಿದ್ದಾರೆ. ಇದೇ ಅವರ ಅಜೆಂಡಾ’ ಎಂದು ವಾಗ್ದಾಳಿ ನಡೆಸಿದರು.

‘ಮುನಿಯಪ್ಪ ಅಂಬೇಡ್ಕರ್‌ರ ತತ್ವ ಸಿದ್ಧಾಂತ ಗಾಳಿಗೆ ತೂರಿದ್ದಾರೆ. ಈಗ ಚುನಾವಣೆ ಉದ್ದೇಶದಿಂದ ಅಂಬೇಡ್ಕರ್‌ ಹೆಸರೇಳುತ್ತಾ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಅವರ ಕುತಂತ್ರಕ್ಕೆ ಮರುಳಾಗಬಾರದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಜಿಲ್ಲೆಯು ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿದ್ದರೂ ಹಳ್ಳಿಯಂತಿದೆ. ಇದಕ್ಕೆ ಮುನಿಯಪ್ಪರ ನಿರ್ಲಕ್ಷ್ಯವೇ ಕಾರಣ. ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅಭಿವೃದ್ಧಿಯಾಗಿವೆ. ಮುನಿಯಪ್ಪ ಅವರಿಗೆ ಜಿಲ್ಲೆಯ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯಿಲ್ಲ’ ಎಂದು ಟೀಕಿಸಿದರು.

ಸೋಲು ಖಚಿತ: ‘ಮುನಿಯಪ್ಪ ಈ ಚುನಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲುವುದು ಖಚಿತ. ಜನ ರಾಜಕೀಯ ಬದಲಾವಣೆ ಬಯಸಿ ಬಿಜೆಪಿಗೆ ಮತ ಚಲಾಯಿಸಲು ಸಾಮೂಹಿಕವಾಗಿ ನಿರ್ಧರಿಸಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್ ಚಿಹ್ನೆಯಡಿ ಆಯ್ಕೆಯಾಗಿರುವ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಮುನಿಯಪ್ಪ ಹೇಳಿದ್ದಾರೆ. ಮುನಿಯಪ್ಪ ಸ್ವಾರ್ಥಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಬ್ಬೊಬ್ಬ ರಾಜಕೀಯ ನಾಯಕನನ್ನು ಸರ್ವನಾಶ ಮಾಡುತ್ತಾ ಬಂದಿದ್ದಾರೆ. ಅವರೆಲ್ಲಾ ಈಗ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಕಾಂಗ್ರೆಸ್‌ ಶಾಸಕರಿಗೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬರಲಿ ಎಂದು ಸವಾಲು ಹಾಕುವುದಕ್ಕೆ ಮುನಿಯಪ್ಪಗೆ ನೈತಿಕತೆ ಇದೆಯೇ? ಮೊದಲು ಮುನಿಯಪ್ಪ ರಾಜಿನಾಮೆ ಕೊಟ್ಟು ಪಕ್ಷೇತರರಾಗಿ ಸ್ಪರ್ಧಿಸುವ ತಾಕತ್ತು ಇದೆಯಾ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.