ADVERTISEMENT

ತರಕಾರಿ ಖರೀದಿಸಿದ ಸಂಸದ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:38 IST
Last Updated 4 ಏಪ್ರಿಲ್ 2020, 15:38 IST
ಸಂಸದ ಎಸ್‌.ಮುನಿಸ್ವಾಮಿ ಬೆಲೆ ಕುಸಿತದ ಕಾರಣಕ್ಕೆ ಕ್ಯಾಪ್ಸಿಕಂ ಬೆಳೆ ನಾಶಪಡಿಸಿದ ಕೋಲಾರ ತಾಲ್ಲೂಕಿನ ಹೂಹಳ್ಳಿಯ ರೈತ ಗೋಪಿ ಅವರ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಧೈರ್ಯ ತುಂಬಿದರು.
ಸಂಸದ ಎಸ್‌.ಮುನಿಸ್ವಾಮಿ ಬೆಲೆ ಕುಸಿತದ ಕಾರಣಕ್ಕೆ ಕ್ಯಾಪ್ಸಿಕಂ ಬೆಳೆ ನಾಶಪಡಿಸಿದ ಕೋಲಾರ ತಾಲ್ಲೂಕಿನ ಹೂಹಳ್ಳಿಯ ರೈತ ಗೋಪಿ ಅವರ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಧೈರ್ಯ ತುಂಬಿದರು.   

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ದೇಶದೆಲ್ಲೆಡೆ ದಿಗ್ಬಂಧನ ಜಾರಿಯಾಗಿ ತರಕಾರಿಗಳ ಬೆಲೆ ಕುಸಿದು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ಸಂಸದ ಎಸ್‌.ಮುನಿಸ್ವಾಮಿ ಅವರು ತರಕಾರಿ ಖರೀದಿ ಮಾಡಲಾರಂಭಿಸಿದ್ದಾರೆ.

ತಾಲ್ಲೂಕಿನ ಹೂಹಳ್ಳಿ ಗ್ರಾಮದ ರೈತ ಗೋಪಿ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆಯನ್ನು ಬೆಲೆ ಕುಸಿತದ ಕಾರಣಕ್ಕೆ ಗುರುವಾರ (ಏ.2) ನಾಶಪಡಿಸಿದ್ದರು.

ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಸುದ್ದಿ ಆಧರಿಸಿ ಸಂಸದರು ಶುಕ್ರವಾರ ರಾತ್ರಿ ಹೂಹಳ್ಳಿಯಲ್ಲಿ ಗೋಪಿಯವರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಅಲ್ಲದೇ, ಸ್ಥಳದಲ್ಲೇ ₹ 50 ಸಾವಿರ ಮುಂಗಡ ಹಣ ಕೊಟ್ಟು ಕ್ಯಾಪ್ಸಿಕಂ ಖರೀದಿಸುವುದಾಗಿ ಭರವಸೆ ನೀಡಿದರು.

ADVERTISEMENT

‘ದಿಗ್ಬಂಧನದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದೆ. ಮತ್ತೊಂದಡೆ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಂಡು ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮಸ್ಯೆಯಾಗಿದೆ. ಈ ಕಾರಣಕ್ಕೆ ಜಿಲ್ಲೆಯ ರೈತರು ಧೃತಿಗೆಡಬಾರದು. ವೈಯಕ್ತಿಕವಾಗಿ ನಾನು ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ರೈತರ ತರಕಾರಿ ಖರೀದಿಸಿ ಬಡವರು ಹಾಗೂ ನಿರ್ಗತಿಕರಿಗೆ ಹಂಚುತ್ತೇನೆ’ ಎಂದು ಮುನಿಸ್ವಾಮಿ ಹೇಳಿದರು.

‘ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಬೆಲೆ ಕುಸಿತದ ಕಾರಣಕ್ಕೆ ನಷ್ಟ ಅನುಭವಿಸುತ್ತಿರುವ ರೈತರ ಬಳಿ ಹೋಗಿ ಅವರ ಕೃಷಿ ಉತ್ಪನ್ನಗಳನ್ನು ಖರೀದಿಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿದ್ದೇನೆ. ರೈತರಿಗೆ ಖರೀದಿಸಿದ ತರಕಾರಿಗಳನ್ನು ಬಡ ಜನರಿಗೆ ಹಂಚುತ್ತೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.