ಮಾಲೂರು: ಪಟ್ಟಣದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಮಂಗಳವಾರ ಜೆಡಿಎಸ್-ಬಿಜೆಪಿ ಸಮನ್ವಯ ಸಭೆ ನಡೆಯಿತು.
ಈ ವೇಳೆ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನಮ್ಮ ನಾಡಿನ ಆರಾಧ್ಯ ದೈವ ಶ್ರೀರಾಮನ ಫೋಟೋ ಕಟ್ಟಲು, ಪೂಜೆ ಮಾಡಲು ಅವಕಾಶ ನೀಡದ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಈ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ನನಗೆ 32 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ, ಈ ಬಾರಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕಕ್ಕೆ ಬಂದಾಗಿನಿಂದ ವಿರೋಧ ಪಕ್ಷದ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ರ್ಥಾನಗಳನ್ನು ಪಡೆದು ಅವರ ದರ್ಪಕ್ಕೆ ಕಡಿವಾಣ ಹಾಕಬೇಕು ಎಂದರು.
ಮಾಲೂರು ತಾಲ್ಲೂಕಿನಲ್ಲಿ ಶಾಸಕರ ವಿರುದ್ಧ ಈ ಬಾರಿ 1.30 ಲಕ್ಷ ಮತಗಳಿವೆ. ಅವರು ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ. ಕಾಂಗ್ರೆಸ್‌ನಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ. ಕಾಂಗ್ರೆಸ್ ನಾಯಕರ ಕಿತ್ತಾಟಕ್ಕೆ ಬದಲಿಯಾಗಿ ಬೆಂಗಳೂರಿಂದ ಹಣವಂತ ಅಭ್ಯರ್ಥಿಯನ್ನು ತಂದು ಹಾಕಿದ್ದಾರೆ. ಅವರು ದುಡ್ಡು ಖಾಲಿ ಮಾಡಿಕೊಂಡು ಮನೆಗೆ ಹೋಗುತ್ತಾರೆ ಎಂದು ಲೇವಡಿ ಮಾಡಿದರು.
ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಂದಾಗಿದ್ದು, ಎಲ್ಲಾ ನಾಯಕರು ಒಮ್ಮತದಿಂದ ಒಪ್ಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ದೇಶ ಈಗ ಸದೃಢವಾಗಿದೆ, ಆದರೆ ಮತ್ತಷ್ಟು ಬಲಿಷ್ಟವಾಗಬೇಕಾದರೆ ಮೋದಿ ಅವರು ಕೆಳಿದ 400 ಸ್ಥಾನಗಳಳನ್ನು ಕೊಡೋಣ ಎಂದರು.
ಮಾಜಿ ಶಾಸಕ ಮಂಜುನಾಥ ಗೌಡ ಮಾತನಾಡಿ, ಈ ಚುನಾವಣೆಯಲ್ಲಿ ಯಾವುದೇ ಜಾತಿ, ಧರ್ಮ ಕೆಲಸ ಮಾಡಲ್ಲ. ಈ ಭಾರಿ ಮಾಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ 50 ಸಾವಿರಕ್ಕೂ ಹೆಚ್ಚಿನ ಮತಗಳು ಜೆಡಿಎಸ್ ಅಭ್ಯರ್ಥಿಗೆ ಚಲಾವಣೆಯಾಗುತ್ತದೆ ಎಂದು ತಿಳಿಸಿದರು.
ವೇಣುಗೋಪಾಲ್, ರಶ್ಮಿ ರಾಮೇಗೌಡ, ರಾಮೇಗೌಡ, ಟಿ.ಬಿ.ಕೃಷ್ಣಪ್ಪ, ಬಲ್ಲಹಳ್ಳಿ ನಾರಾಯಣಸ್ವಾಮಿ, ಅನಿತಾ ನಾಗರಾಜ್ ಸೇರಿದಂತೆ ಬಿಜೆಪಿ, ಜೆಡಿಎಸ್ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.