ADVERTISEMENT

ಸಂಸದರಿಗೆ ಸಹಕಾರ ಕ್ಷೇತ್ರದ ಅರಿವಿಲ್ಲ

ಡಿಸಿಸಿ ಬ್ಯಾಂಕ್‌ ವಿರುದ್ಧ ಅಪಪ್ರಚಾರ: ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 7:12 IST
Last Updated 10 ಸೆಪ್ಟೆಂಬರ್ 2019, 7:12 IST

ಕೋಲಾರ: ‘ಸಹಕಾರ ಕ್ಷೇತ್ರದ ಅರಿವಿಲ್ಲದೆ ಡಿಸಿಸಿ ಬ್ಯಾಂಕ್ ವಿರುದ್ಧ ಹೇಳಿಕೆ ನೀಡಿರುವ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಚರ್ಚೆಗೆ ಬಂದರೆ ಉತ್ತರ ಕೊಡುತ್ತೇನೆ’ ಎಂದು ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿ.ಹಿರಿಯಪ್ಪ ಸವಾಲು ಹಾಕಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಡಿಸಿಸಿ ಬ್ಯಾಂಕ್‌ನ ಸಾಧನೆ ಬಗ್ಗೆ ಸತ್ಯ ಅರಿತು ಮಾತನಾಡಬೇಕು. ಇಲ್ಲಸಲ್ಲದ ಆರೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ನನಗೆ 80 ವರ್ಷ ವಯಸ್ಸಾಗಿದ್ದು, ಸಹಕಾರ ಕ್ಷೇತ್ರದಲ್ಲಿ 65 ವರ್ಷದ ಅನುಭವವಿದೆ. ಈ ಕ್ಷೇತ್ರದ ಬಗ್ಗೆ ಸಂಸದರಿಗೆ ಸ್ವಲ್ಪವೂ ಜ್ಞಾನವಿಲ್ಲ. ಮಹಿಳಾ ಸ್ವಸಾಹಯ ಸಂಘಗಳ ಸದಸ್ಯರು ಮತ್ತು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಡಿಸಿಸಿ ಬ್ಯಾಂಕ್ ಬಡವರ ಪಾಲಿನ ದೇವಾಲಯವಾಗಿದೆ’ ಎಂದು ಹೇಳಿದರು.

ADVERTISEMENT

‘ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ಮಾರ್ಗದರ್ಶನದಲ್ಲಿ ನಾವೆಲ್ಲಾ ಮುನಿಸ್ವಾಮಿ ಅವರ ಗೆಲುವಿಗೆ ಶ್ರಮಿಸಿದ್ದೇವೆ. ಚುನಾವಣೆಗೂ ಮುನ್ನ ಮಹಿಳಾ ಸಂಘಗಳಿಗೆ ಸಾಲ ನೀಡಿದ್ದರಿಂದ ಮಹಿಳೆಯರು ಮತ ಹಾಕಿದ್ದಾರೆ ಎಂಬುದನ್ನು ಸಂಸದರು ಮರೆಯಬಾರದು’ ಎಂದರು.

‘ಮುನಿಸ್ವಾಮಿ ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಸುಮಾರು ಶೇ 70ರಷ್ಟು ಪರಿಶಿಷ್ಟ ಮಹಿಳೆಯರೇ ಹೆಚ್ಚಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಡಿದ್ದಾರೆ. ಸಂಸದರ ಕುಹಕದ ಮಾತು ಆ ಮಹಿಳೆಯರಿಗೆ ಗೊತ್ತಾದರೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಗುಡುಗಿದರು.

‘ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೊಳಿಸಿದ ಸಾಲ ಮನ್ನಾ ಯೋಜನೆಯಿಂದ ₹ 320 ಕೋಟಿ ಬೆಳೆ ಸಾಲ ಮನ್ನಾ ಆಗಿದೆ. ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಯೋಜನೆ ಸಿಕ್ಕಿದೆ. 5 ವರ್ಷದಲ್ಲಿ 3 ಮಂದಿಯನ್ನು ಮುಖ್ಯಮಂತ್ರಿಗಳಾಗಿ ಮಾಡಿದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿತೆ?’ ಎಂದು ಪ್ರಶ್ನಿಸಿದರು.

ಸಾಲ ಕೊಡಿಸಲಿ: ‘ವಾಣಿಜ್ಯ ಬ್ಯಾಂಕ್‌ಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿವೆ. ಮುನಿಸ್ವಾಮಿ ಅವರಿಗೆ ಬಡವರು, ರೈತರ ಬಗ್ಗೆ ಕಾಳಜಿಯಿದ್ದರೆ ಕೇಂದ್ರದಿಂದ ಶೂನ್ಯ ಬಡ್ಡ ದರದ ಸಾಲ ಕೊಡಿಸಲಿ. ಅದು ಸಾಧ್ಯವಾಗದಿದ್ದರೆ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ’ ಎಂದು ತಾಕೀತು ಮಾಡಿದರು.

‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪರ ಬಗ್ಗೆ ಬೇಸರವಾಗಿ ಚುನಾವಣೆಯಲ್ಲಿ ಮುನಿಸ್ವಾಮಿಯವರ ಪರ ಕೆಲಸ ಮಾಡಿದ್ದೇವೆ. ಸಂಸದರು ಇದನ್ನು ಮರೆತು ಬಾಯಿ ತೆವಲಿಗೆ ಮನಬಂದಂತೆ ಮಾತನಾಡಿದರೆ ಸಹಿಸುವುದಿಲ್ಲ. ಬ್ಯಾಂಕ್ ಬಗ್ಗೆ ಏನಾದರೂ ಮಾತನಾಡುವುದಾದರೆ ಬಹಿರಂಗ ಚರ್ಚೆಗೆ ಬರಲು’ ಎಂದು ಪಂಥಾಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.