ಮುಳಬಾಗಿಲು: ಸ್ವಸಹಾಯ ಗುಂಪುಗಳ ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಂಡು, ಆರ್ಥಿಕವಾಗಿ ಸದೃಢಗೊಳಿಸಲು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರದಲ್ಲಿ ಅಕ್ಕ ಕೆಫೆ (ಒಲವಿನ ಊಟ) ತೆರೆಯಲಾಗಿದೆ.
ಆದರೆ, ಈ ಕೆಫೆಯನ್ನು ನಿರ್ವಹಣೆ ಮತ್ತು ಮುನ್ನಡೆಸಲು ಇದುವರೆಗೆ ಯಾರೂ ಮುಂದೆ ಬಾರದ, ಕಾರಣ ಕಳೆದೊಂದು ತಿಂಗಳಿನಿಂದ ಕೆಫೆ ಕಟ್ಟಡಕ್ಕೆ ಬೀಗ ಹಾಕಲಾಗಿದೆ.
ಮುಳಬಾಗಿಲು ನಗರದ ಶಾಸಕರ ಕಚೇರಿ ಕಟ್ಟಡ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮುಂಭಾಗದಲ್ಲಿದ್ದ ಹಳೆ ಕಟ್ಟಡವೊಂದನ್ನು ₹9.50 ಲಕ್ಷ ವೆಚ್ಚದಲ್ಲಿ ನವೀಕರಿಸಿ, ಕೆಫೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು, ಗೋಡೆಗಳ ಮೇಲೆ ದೇಸೀ ಕಲೆಯ ಚಿತ್ರಗಳನ್ನು ಬಿಡಿಸಲಾಗಿದೆ. ಕಬ್ಬಿಣದ ಚಾವಣಿ ಮತ್ತಿತರರ ಸೌಕರ್ಯಗಳೊಂದಿಗೆ ಕಟ್ಟಡವನ್ನು ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈವರೆಗೆ ಅಕ್ಕ ಕೆಫೆಯನ್ನು ನಿರ್ವಹಿಸುವ ಅಥವಾ ಮುನ್ನಡೆಸಲು ಮಹಿಳೆಯರ ಸ್ವಸಹಾಯ ಗುಂಪುಗಳ ಸಂಘದ ಸದಸ್ಯರು ಆಸಕ್ತಿ ತೋರದ ಕಾರಣ ಕಟ್ಟಡವು ಒಂದು ತಿಂಗಳಿನಿಂದ ನಿರುಪಯುಕ್ತವಾಗಿದೆ.
ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರನ್ನು ಸಂಘಟಿಸುವುದು. ಅವರನ್ನು ಕೃಷಿ ಮತ್ತು ಕೃಷಿಯೇತರ ವಿಭಾಗಗಳ ಅಡಿ ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದು. ಆ ಮೂಲಕ ಅವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುವಂತೆ ಮಾಡಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ(ಎನ್ಆರ್‌ಎಲ್ಎಂ) ಮಹಿಳೆಯರಿಗೆ ನಿರಂತರವಾಗಿ ನಾನಾ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆದರೆ, ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಈ ಯೋಜನೆಗಳನ್ನು ಸೂಕ್ತ ಸಮಯಕ್ಕೆ ಸದ್ಬಳಕೆ ಮಾಡಿಕೊಳ್ಳದ ಕಾರಣ ಯೋಜನೆಗೆ ಅಂದುಕೊಂಡಷ್ಟು ಬೆಂಬಲ ವ್ಯಕ್ತವಾಗಿಲ್ಲ.
ಕೆಫೆ ನಡೆಸುವವರು ಕಡ್ಡಾಯವಾಗಿ ಎನ್ಆರ್‌ಎಲ್ಎಂ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ (ಎನ್‌ಯುಎಲ್ಎಂ) ಸ್ವಸಹಯ ಗುಂಪಿನ ಸದಸ್ಯರಾಗಿದ್ದು, ಪಾಕ ಪರಿಣತಿಯಲ್ಲಿ ಆಸಕ್ತರಾಗಿಬೇಕು. ಯಾವುದೇ ಒಕ್ಕೂಟದ ಹಣಕಾಸು ಸಂಸ್ಥೆಯ ಸಾಲದ ಬಾಕಿದಾರರಾಗಿರಬಾರದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಲಾಗಿದೆ. ಈ ಷರತ್ತುಗಳೇ ಕೆಫೆ ನಿರ್ವಹಿಸಲು ಇಚ್ಛಿಸುವ ಸದಸ್ಯರ ಆಕಾಂಕ್ಷೆಗೆ ಹಿನ್ನೆಡೆಯಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಹೀಗಾಗಿ, ಕೆಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಿದರೆ, ಅಕ್ಕೆ ಕೆಫೆ ನಿರ್ವಹಿಸಲು ಅರ್ಹರು ಮುಂದೆ ಬರಬಹುದು ಎನ್ನಲಾಗುತ್ತಿದೆ.
ಕೆಫೆ ಆರಂಭಿಸಲು ಮುಂದಾಗುವವರು ಮುಂಗಡವಾಗಿ ₹30 ಸಾವಿರ ಪಾವತಿಸಬೇಕು. ಆರಂಭದಲ್ಲಿ ಮಾಸಿಕ 5500 ಬಾಡಿಗೆ ನೀಡಬೇಕು. ಅಂಥ ಅರ್ಹರಿಗೆ ಕೆಫೆ ಹಸ್ತಾಂತರಿಸಲಾಗುವುದುಡಾ.ಕೆ. ಸರ್ವೇಶ್ ಕಾರ್ಯ ನಿರ್ವಾಹಕ ಅಧಿಕಾರಿ ತಾ. ಪಂ
ಮುಳಬಾಗಿಲು ನಗರದಲ್ಲಿ ಇಂದಿರಾ ಕ್ಯಾಂಟೀನ್ಆಹಾರ ಪದಾರ್ಥಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಅಕ್ಕ ಕೆಫೆಯಿಂದ ಮತ್ತಷ್ಟು ರಿಯಾಯಿತಿ ಸಿಗಲಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆನೀಲಮ್ಮ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.