ADVERTISEMENT

ಮುಳಬಾಗಿಲು | ಕೊಲಿಮಿಕುಂಟೆ ಸುತ್ತಲೂ ಪೊದೆ

ವಾಯು ವಿಹಾರ ಪಥ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 8:15 IST
Last Updated 16 ಜೂನ್ 2025, 8:15 IST
ಮುಳಬಾಗಿಲು ಶಿವಕೇಶವ ನಗರದಲ್ಲಿ ಇರುವ ವಿಶಾಲವಾದ ಕೊಲಿಮಿಕುಂಟೆ 
ಮುಳಬಾಗಿಲು ಶಿವಕೇಶವ ನಗರದಲ್ಲಿ ಇರುವ ವಿಶಾಲವಾದ ಕೊಲಿಮಿಕುಂಟೆ    

ಮುಳಬಾಗಿಲು: ಪುರಸಭೆಯಾಗಿದ್ದ ಮುಳಬಾಗಿಲು ನಗರ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ದಿನೇ ದಿನೇ ಜನಸಂಖ್ಯೆ, ವ್ಯಾಪಾರ ವಹಿವಾಟು ಹೆಚ್ಚಾಗುತ್ತಲೇ ಇದೆ. ಜನ ವಾಯುವಿಹಾರ ಮತ್ತಿತರರ ಚಟುವಟಿಕೆಗಳಿಗಾಗಿ ಹೆದ್ದಾರಿ ಹಾಗೂ ಗ್ರಾಮಾಂತರ ರಸ್ತೆಗಳಿಗೆ ಹೋಗಬೇಕಾಗಿದೆ. ಇದರಿಂದ ನಗರದಲ್ಲಿನ ಸಾರ್ವಜನಿಕ ಸ್ಥಳಗಳನ್ನು ವಾಯು ವಿಹಾರಿಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕಾಗಿದೆ.

ನಗರ ವೇಗವಾಗಿ ಬೆಳೆಯುತ್ತಿರುವ ಕಾರಣದಿಂದ ನಗರದ ಜನ ವಾಯು ವಿಹಾರಕ್ಕಾಗಿ ಬೆಳಗ್ಗೆ–ಸಂಜೆ ನಗರದ ಸುತ್ತಮುತ್ತಲಿನ ರಸ್ತೆಗಳಿಗೆ ಹೋಗುತ್ತಿದ್ದು ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಜೀವ ಭಯದಿಂದ ಸಂಚಾರ ಮಾಡಬೇಕಾಗಿದೆ. ನಗರದ ಶಿವಕೇಶವ ನಗರದ ಬಳಿ ಇರುವ ಕೊಲಿಮಿಕುಂಟೆ ಸುತ್ತಲೂ ಇರುವ ವಾಕಿಂಗ್ ಮಾರ್ಗವನ್ನು ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ‌ ಎನ್ನುವುದು ಜನರ ಆಗ್ರಹ.  

ನಗರದ ಪೂರ್ವ ಭಾಗದ ಕಡೆ ನಗರ ರಾಷ್ಟ್ರೀಯ ಹೆದ್ದಾರಿ 75 ದಾಟಿ ಸೊಣ್ಣವಾಡಿ, ಕವತನಹಳ್ಳಿ ಮತ್ತಿತರ ಗ್ರಾಮಗಳ ಕಡೆಗೆ ವ್ಯಾಪಿಸಿದೆ. ನಗರದ ಜನ ವಿಶ್ರಾಂತಿ ತೆಗೆದುಕೊಳ್ಳಲು ಯಾವ ಉದ್ಯಾನ ಅಥವಾ ಇನ್ನಿತರ ಸೌಲಭ್ಯ ಇಲ್ಲದ ಕಾರಣದಿಂದ ಜನ ಮನೆಗಳ ಮೇಲೆ, ಬೀದಿಗಳಲ್ಲಿ ಕೆಲವರು ವಾಕಿಂಗ್ ಮಾಡಿದರೆ ಮತ್ತೆ ಕೆಲವರು ರಾಷ್ಟ್ರೀಯ ಹೆದ್ದಾರಿ 75, ಬೈಯಪ್ಪನಹಳ್ಳಿ ರಸ್ತೆ, ತಿಮ್ಮರಾವುತ್ತನಹಳ್ಳಿ ರಸ್ತೆ, ತಾಯಲೂರು, ಕೆಜಿಎಫ್, ನರಸಿಂಹತೀರ್ಥ, ಶ್ರೀನಿವಾಸಪುರ, ಗೂಕುಂಟೆ ಮತ್ತಿತರ ರಸ್ತೆಗಳಿಗೆ ಹೋಗುವಂತಾಗಿದೆ. ಇದರಿಂದ ನಗರದಲ್ಲೇ ವಾಯು ವಿಹಾರಿಗಳ ಸಂಚಾರಕ್ಕೆ ಕೆಲವು ಸ್ಥಳಗಳನ್ನು ನಿರ್ಮಾಣ ಮಾಡಿಕೊಟ್ಟರೆ ವಾಕಿಂಗ್ ಮಾಡುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಜನರ ಆಗ್ರಹ.

ADVERTISEMENT

ಇನ್ನು ಕೋಲಾರ ರಸ್ತೆ ಸೋಮೇಶ್ವರ ಪಾಳ್ಯದ ಬಳಿ ಇರುವ ಉದ್ಯಾನದಲ್ಲಿ ಕೆಲವರು ವಾಕಿಂಗ್ ಮಾಡಲು ಅನುಕೂಲವಾದರೂ ನಗರದ ವಾಸಿಗಳಿಗೆ ದೂರವಾಗಲಿದೆ. ಶಿವಕೇಶವ ನಗರದಲ್ಲಿ ಇರುವ ಕೊಲಿಮಿಕುಂಟೆ ಸುತ್ತಲೂ ನಗರಸಭೆಯಿಂದ ಸ್ವಚ್ಛ ಮಾಡಿಸಿ ಸುತ್ತಲೂ ವಾಕಿಂಗ್ ಮಾರ್ಗ ನಿರ್ಮಿಸಿದರೆ ನಗರ ಸ್ವಚ್ಛವಾಗುವುದಲ್ಲದೆ ವಾಕಿಂಗ್ ಮಾಡುವವರಿಗೂ ಒಂದು ಸ್ಥಳ ನಿರ್ಮಿಸಿದಂತಾಗುತ್ತದೆ.

ಗಿಡಗಂಟಿಗಳಿಂದ ಕೂಡಿದ ಕೊಲಿಮಿಕುಂಟೆ: ಶಿವಕೇಶವ ನಗರದ ಹೃದಯ ಭಾಗದಲ್ಲಿ ಇರುವ ಕೊಲಿಮಿಕುಂಟೆ ನೀರಿನ‌ ದೊಡ್ಡ ಕುಂಟೆ. ಪಾಚಿ, ಗಿಡಗಂಟಿ, ಕಸ ಕಡ್ಡಿಯಿಂದ ತುಂಬಿ‌ ತುಳುಕುತ್ತಿದ್ದು ಕೊಳೆತ ನೀರಿನ ದುರ್ವಾಸನೆಯಿಂದ ಕುಂಟೆ ಸುತ್ತಲೂ ಜನ ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ.  

ಕುಂಟೆ ಸುತ್ತಲೂ ಬೆಳೆದಿರುವ ಪೊದೆಗಳು: ಕುಂಟೆ ಸುತ್ತಲೂ ನಾನಾ ಬಗೆಯ ಗಿಡಗಂಟಿ ಸುಮಾರು 20-30 ಅಡಿಗಳಷ್ಟು ಎತ್ತರಕ್ಕೆ ಬೆಳೆದಿದ್ದು ಮೂರು ಭಾಗಗಳಲ್ಲಿ ಕುಂಟೆಯೇ ಕಾಣಿಸದಂತೆ ಆವರಿಸಿಕೊಂಡಿದೆ. ಇದರಿಂದ ಚಿಕ್ಕಮಕ್ಕಳು ಸಂಚರಿಸಲು ಹೆದರುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಕುಂಟೆ ಒಡಲು ಸೇರುತ್ತಿರುವ ಹಳೆ ಮನೆಗಳ ತ್ಯಾಜ್ಯ: ಇನ್ನು ನಗರದಲ್ಲಿ ಹಳೆ ಮನೆಗಳನ್ನು ಕೆಡವಿದ ಮಣ್ಣು, ಇಟ್ಟಿಗೆ, ಮುರಿದ ಕಲ್ಲು, ಚಪ್ಪಡಿ, ಸಿಮೆಂಟ್ ತ್ಯಾಜ್ಯ ಮತ್ತಿತರ ವಸ್ತುಗಳನ್ನು ಕೆಲವರು ಕುಂಟೆಯಲ್ಲಿ ಸುರಿಯುತ್ತಿರುವ ಪರಿಣಾಮವಾಗಿ ಕುಂಟೆ ದಿನೇ ದಿನೇ ಮುಚ್ಚುವ ಸ್ಥಿತಿಗೆ ತಲು‍ಪಿದೆ.

ಮಳೆ ಬಂದರೆ ಮನೆಗಳಿಗೆ ನುಗ್ಗುವ ಮಳೆ ನೀರು: ಕುಂಟೆಗೆ ಕೇವಲ ಒಂದು ಭಾಗ ಮಾತ್ರ ಕಾಂಪೌಂಡ್ ಇದ್ದು ಉಳಿದಂತೆ ಮೂರು ಕಡೆ ಕಾಂಪೌಂಡ್ ಇಲ್ಲವಾಗಿದೆ. ಇದರಿಂದ ಮಳೆ ಬಂದು ಕುಂಟೆ ತುಂಬಿದರೆ ಸರ್ಕಾರಿ ಪ್ರಾಥಮಿಕ ಶಾಲೆ ಕಡೆ ಮನೆಗಳಿಗೆ ನುಗ್ಗಿದರೆ, ಮತ್ತೊಂದು ಭಾಗದಲ್ಲಿ ಇರುವ ಸ್ಮಶಾನದ ಸಮಾಧಿಗಳು ಮುಳುಗಿ ಹೋಗುತ್ತವೆ. ಇದರಿಂದಾಗಿ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಒಂದು ಕಡೆ ದೊಡ್ಡ ಕಾಲುವೆ (ಚರಂಡಿ) ನಿರ್ಮಿಸಿದರೆ ನೀರು ನುಗ್ಗುವುದನ್ನು ತಪ್ಪಿಸಬಹುದು.

ಸುತ್ತಲೂ ವಾಕಿಂಗ್ ಪಾಥ್: ಕುಂಟೆ ಸುತ್ತಲೂ ಮಣ್ಣನ್ನು ಎತ್ತರವಾಗಿ ಹಾಕಿ ನಂತರ ಸಂಚಾರ ಪಥ ನಿರ್ಮಿಸಿ, ಕಬ್ಬಿಣದ ಬೇಲಿ ಅಳವಡಿಸಿದರೆ ವಾಕಿಂಗ್ ಮಾಡುವವರಿಗೆ ಮಾರ್ಗ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಮನವಿ.  

ಕುಂಟೆಯ ಸುತ್ತಲೂ ಬೆಳೆದಿರುವ ಗಿಡಗಂಟಿ
ಕುಂಟೆ ಸುತ್ತಲೂ ಹರಡಿರುವ ಪೊದೆ   

ಕೊಲಿಮಿಕುಂಟೆ ಸ್ವಚ್ಛತೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಸುತ್ತಲೂ ವಾಯುವಿಹಾರ ಪಥ ಕುರಿತು ಮೊದಲು ಸಭೆ ನಡೆಸಿ ನಂತರ ಯೋಜನೆ ಹಮ್ಮಿಕೊಳ್ಳಬೇಕಾಗಿದೆ

-ವಿ.ಶ್ರೀಧರ್ ನಗರಸಭೆ ಪೌರಾಯುಕ್ತ

ವಾಯುವಿಹಾರಿಗಳಿಗೆ ಅವಕಾಶ  ಕೊಲಿಮಿಕುಂಟೆ ಸುತ್ತಲೂ ಗಿಡಗಂಟಿ ಬೆಳೆದು ನೀರಿನಲ್ಲಿ ಪಾಚಿ ಕೊಳೆತು ನಾರುತ್ತಿದೆ. ಇದರಿಂದಾಗಿ ಜನ ಮತ್ತು ಜಾನುವಾರು ಆಕಸ್ಮಿಕವಾಗಿ ನೀರಿಗೆ ಇಳಿದರೆ ವಾಪಸ್ ಬರುವುದೇ ಅನುಮಾನ. ಕುಂಟೆ ಸುತ್ತಲೂ ಕಬ್ಬಿಣದ ಬೇಲಿ ನಿರ್ಮಿಸಿ ವಾಕಿಂಗ್ ಪಾರ್ಕ್ ಮಾಡಿದರೆ ಕುಂಟೆಗೆ ರಕ್ಷಣೆ ಸಿಗುತ್ತದೆ. ವಾಯುವಿಹಾರಿಗಳಿಗೆ ಅವಕಾಶ ಮಾಡಿದಂತಾಗುತ್ತದೆ. ನಾಗರಾಜ್ ಸ್ಥಳೀಯ ವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.