ADVERTISEMENT

ಮುಳಬಾಗಿಲು: 13 ವರ್ಷಗಳ ನಂತರ ಕೊಲೆ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:18 IST
Last Updated 25 ಡಿಸೆಂಬರ್ 2025, 7:18 IST
ಮುನಿರಾಜು
ಮುನಿರಾಜು   

ಮುಳಬಾಗಿಲು: 13 ವರ್ಷಗಳ ಹಿಂದೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಳಬಾಗಿಲು ನಗರ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಬೋವಿಹಳ್ಳಿ ನಿವಾಸಿ ಮುನಿರಾಜು (45) ಬಂಧಿತ ಆರೋಪಿ. ಆರೋಪಿಯನ್ನು ಮುಳಬಾಗಿಲು ಪೊಲೀಸರು ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: 13 ವರ್ಷಗಳ ಹಿಂದೆ ತಮಿಳುನಾಡು ಮೂಲದ ಮೂರ್ತಿ ಅವರು ಬೆಂಗಳೂರಿನಿಂದ ತಮಿಳುನಾಡು ಕಡೆಗೆ ಟೆಂಪೊದಲ್ಲಿ ಕಟ್ಟಡ ನಿರ್ಮಾಣದ ಕಬ್ಬಿಣದ ಕಂಬಿ ಸಾಗಿಸಿಸುತ್ತಿದ್ದರು. ವಿಶ್ರಾಂತಿಗಾಗಿ ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ಮಲಗಿದ್ದರು. ಅಲ್ಲಿಗೆ ಬಂದ ಕಳ್ಳ ಮುನಿರಾಜು ಮಲಗಿದ್ದ ಸ್ಥಳದಲ್ಲೇ ಮೂರ್ತಿಯನ್ನು ಕೊಲೆ ಮಾಡಿ ಬಿಸಾಡಿದ್ದರು.

ADVERTISEMENT

ನಂತರ ಟೆಂಪೊ ಸಮೇತ ಕಬ್ಬಿಣದ ಕಂಬಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾರಾಟ ಮಾಡಿ ತಲೆ ಮರೆಸಿಕೊಂಡಿದ್ದರು. ಈ ಸಂಬಂಧ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ, ಆರೋಪಿ ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಳಬಾಗಿಲು ಸರ್ಕಲ್ ಇನ್‌ಸ್ಪೆಕ್ಟರ್ ಸಂಗನಾಥ, ಶಂಕರ್, ಶೇಖರ್, ಶಿವರಾಜ್ ಕುಮಾರ್ ಮಂಗಳವಾರ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.