ADVERTISEMENT

₹ 4 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದ ನಗರಸಭೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 10:10 IST
Last Updated 1 ಆಗಸ್ಟ್ 2022, 10:10 IST

ಕೋಲಾರ: ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಸ್ವತ್ತನ್ನು ಸೋಮವಾರ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

16ನೇ ವಾರ್ಡ್‌ನ ಸರ್ವೆ ಸಂಖ್ಯೆ 51ರಲ್ಲಿನ 150x80 ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಎರಡು ಶೆಡ್‌ಗಳು ಹಾಗೂ ತಂತಿಬೇಲಿ ಕಾಂಪೌಂಡ್‌ ಅನ್ನು ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದ್ದಾರೆ. ಈ ಸ್ವತ್ತಿನ ಮೌಲ್ಯ ಸುಮಾರು ₹ 4 ಕೋಟಿ ಇರಬಹುದೆಂದು ಅಂದಾಜಿಸಿದ್ದಾರೆ.

ಈ ಬಗ್ಗೆ ವಾರ್ಡ್‌ ಸದಸ್ಯ ಕೂಡ ಹಲವು ಬಾರಿ ಸಭೆಯಲ್ಲಿ ಪ್ರಸ್ತಾಪಿಸಿ ಒತ್ತುವರಿ ತೆರವಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಶಬರೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಶ್‌ ಈ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಆಯುಕ್ತ ಪವನ್‌ ಕುಮಾರ್‌ ನಿರ್ದೇಶನದೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ವಾಹನದಲ್ಲಿ ತೆರವುಗೊಳಿಸಿದರು.

‘ದಾಖಲೆ ಪರಿಶೀಲಿಸಿದಾಗ ನಗರಸಭೆಗೆ ಸೇರಿದ ಸರ್ಕಾರಿ ಸ್ವತ್ತು ಎಂಬುದು ಗೊತ್ತಾಯಿತು. 2003–4ರಲ್ಲಿ ಸರ್ವೆ ಸಂಖ್ಯೆ 15 ಹಾಗೂ 73/2ರಲ್ಲಿ 30x40 ವಿಸ್ತೀರ್ಣದ ನಿವೇಶನವೊಂದು ಇತ್ತು. ಅದನ್ನು ಆ ಮಾಲೀಕರು ಮತ್ತೊಬ್ಬರಿಗೆ ಖಾತೆ ಮಾಡಿಕೊಡುವಾಗ ಚೆಕ್‌ಬಂದಿಯಲ್ಲಿ ಸರ್ವೆ ಸಂಖ್ಯೆ 51ರಲ್ಲಿನ 150x80 ವಿಸ್ತೀರ್ಣದ ಜಾಗ ತೋರಿಸಿದ್ದಾರೆ. ಹಿಂದೆ 30x40 ವಿಸ್ತೀರ್ಣ ಇದ್ದದ್ದನ್ನು ಅರ್ಜಿಯಲ್ಲಿ 150x80 ವಿಸ್ತೀರ್ಣವೆಂದು ನಮೂದಿಸಿದ್ದಾರೆ’ ಎಂದು ನಗರಸಭೆಯ ಕಂದಾಯ ಅಧಿಕಾರಿ ಎಂ.ಕೃಷ್ಣಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಈ ಹಿಂದೆ ನಗರಸಭೆಯಿಂದ ಒತ್ತುವರಿ ತೆರವುಗೊಳಿಸಿದ್ದರೂ ಮತ್ತೆ ತಂತಿ ಬೇಲಿ, ಶೆಡ್‌ ನಿರ್ಮಿಸಿಕೊಂಡಿದ್ದರು’ ಎಂದರು.

ಕಾರ್ಯಾಚರಣೆಯಲ್ಲಿ ಎಇಇ ಪದ್ಮನಾಭರೆಡ್ಡಿ, ಆರೋಗ್ಯ ನಿರೀಕ್ಷಕ ನವಾಜ್‌, ಕಂದಾಯ ಅಧಿಕಾರಿ ಎಂ.ಕೃಷ್ಣಪ್ಪ, ಕಂದಾಯ ನಿರೀಕ್ಷಕರಾದ ಅಭಿಷೇಕ್‌ ಮಾನೆ, ಅನಿಲ್‌ ಕುಮಾರ್‌ ಜೊತೆಗೆ ಸಿಬ್ಬಂದಿ ಗೋವಿಂದಪ್ಪ, ಜಗದೀಶ್‌, ನಾರಾಯಣಸ್ವಾಮಿ, ರಮೇಶ್‌, ಭವ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.