ADVERTISEMENT

ನಗರಸಭೆ ಮಳಿಗೆ ಹಂಚಿಕೆ: ತೀವ್ರ ವಾಕ್ಸಮರ

ಸದಸ್ಯರ ಪರ–ವಿರೋಧ ಚರ್ಚೆ: ಸಾಮಾನ್ಯ ಸಭೆಯಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 16:10 IST
Last Updated 28 ಜುಲೈ 2021, 16:10 IST
ಕೋಲಾರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಾಲ್ಗೊಂಡರು
ಕೋಲಾರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಾಲ್ಗೊಂಡರು   

ಕೋಲಾರ: ನಗರಸಭೆ ಮಳಿಗೆಗಳ ಹಂಚಿಕೆ ವಿಚಾರವಾಗಿ ಸದಸ್ಯರ ನಡುವೆ ಇಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ವಾಕ್ಸಮರ ನಡೆದು ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.

‘ನಗರಸಭೆಯ 226 ಮಳಿಗೆಗಳನ್ನು ಹರಾಜು ಹಾಕಿ ಒಂದೂವರೆ ವರ್ಷವಾಗಿದೆ. ಹೈಕೋರ್ಟ್ ಆದೇಶದಂತೆ ಕಾನೂನು ಸಲಹೆ ಪಡೆದು ಹರಾಜಿನಲ್ಲಿ ಠೇವಣಿ ಪಾವತಿಸಿರುವವರಿಗೆ ಮಳಿಗೆ ನೀಡಬೇಕು’ ಎಂದು ನಗರಸಭೆ ಸದಸ್ಯರ ಅಂಬರೀಶ್‌ ಒತ್ತಾಯಿಸಿದರು. ಸದಸ್ಯರಾದ ಎಸ್‌.ಆರ್‌.ಮುರಳೀಗೌಡ ಹಾಗೂ ಸೈಯದ್ ಅಫ್ಜರ್ ಇದಕ್ಕೆ ಧ್ವನಿಗೂಡಿಸಿದರು.

ಆಗ ಮಧ್ಯಪ್ರವೇಶಿಸಿದ ಸದಸ್ಯ ಬಿ.ಎಂ.ಮುಬಾರಕ್‌, ‘ಈ ಹಿಂದೆ ಬಾಡಿಗೆ ಪಡೆದಿದ್ದವರಿಗೆ ಮಳಿಗೆಗಳನ್ನು ಕೊಡಬೇಕು. ಎಂ.ಜಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಆದೇಶ ಆಗಿರುವುದರಿಂದ ಆ ಭಾಗದ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಹಂಚಿಕೆ ಮಾಡಬಹುದು’ ಎಂದು ಸಲಹೆ ನೀಡಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಂಬರೀಶ್‌, ‘ಸಾಕಷ್ಟು ಮಂದಿ ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು ಹರಾಜಿನಲ್ಲಿ ಮಳಿಗೆ ಪಡೆದಿದ್ದು, ರಸ್ತೆ ಅಗಲೀಕರಣದಿಂದ ಅವರಿಗೆ ಅನ್ಯಾಯವಾಗಲಿದೆ’ ಎಂದರು. ಇದರಿಂದ ಪರಸ್ಪರರ ಮಧ್ಯೆ ಮಾತಿನ ಸಂಘರ್ಷ ನಡೆದು ಗೊಂದಲ ಸೃಷ್ಟಿಯಾಯಿತು. ಹೀಗಾಗಿ ಸಭೆಯನ್ನು ಕೆಲ ಕಾಲ ಮುಂದೂಡಲಾಯಿತು.

ಸ್ವಲ್ಪ ಸಮಯದ ಬಳಿಕ ಆರಂಭವಾದ ಸಭೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ವಿಸ್ತೃತ ಚರ್ಚೆ ನಡೆಯಿತು. ಆಸ್ತಿ ತೆರಿಗೆ ವಸೂಲಾತಿ ಪ್ರಕ್ರಿಯೆ ಉನ್ನತೀಕರಿಸಲು ಬೆಂಗಳೂರಿನ ಸೆಮಿನಲ್ ಸಾಫ್ಟ್‌ವೇರ್ ಪ್ರೈವೇಟ್‌ ಲಿಮಿಟೆಡ್‌ನಿಂದ ಆಸ್ತಿಗಳ ಸರ್ವೆ ಮಾಡಿಸಿ ಗಣಕೀಕೃತಗೊಳಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಸದಸ್ಯರು ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದರು.

ಶುಲ್ಕ ಹೆಚ್ಚಳ: ಅಭಿವೃದ್ಧಿ ಶುಲ್ಕ ಪಡೆದು ಹೊಸದಾಗಿ ಏಕ ನಿವೇಶನಗಳಿಗೆ ಖಾತೆ ತೆರೆಯಲು, ಒಂದನೇ ವಾರ್ಡ್‌ನಲ್ಲಿ ಸಂಪ್ ನಿರ್ಮಾಣ, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆ ಹಾಗೂ ರಸ್ತೆ ಡಾಂಬರೀಕರಣಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ವಾಣಿಜ್ಯ ಪರವಾನಗಿ ಶುಲ್ಕ ಹೆಚ್ಚಳ, ಹಳೆ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಬಗ್ಗೆ ಚರ್ಚೆಯಾಯಿತು.

ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌, ಆಯುಕ್ತ ಪ್ರಸಾದ್ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.