ADVERTISEMENT

ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಬೀಚಗೊಂಡಹಳ್ಳಿ: ಸಹೋದರರ ಮಾರಾಮಾರಿ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:17 IST
Last Updated 26 ಫೆಬ್ರುವರಿ 2020, 15:17 IST
ಕೋಲಾರ ತಾಲ್ಲೂಕಿನ ಬೀಚಗೊಂಡಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬುಧವಾರ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದ ಮೃತರ ಸಂಬಂಧಿಕರೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾತುಕತೆ ನಡೆಸಿದರು.
ಕೋಲಾರ ತಾಲ್ಲೂಕಿನ ಬೀಚಗೊಂಡಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬುಧವಾರ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದ ಮೃತರ ಸಂಬಂಧಿಕರೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾತುಕತೆ ನಡೆಸಿದರು.   

ಕೋಲಾರ: ತಾಲ್ಲೂಕಿನ ಬೀಚಗೊಂಡಹಳ್ಳಿಯಲ್ಲಿ ಕೆರೆ ನೀರು ಬಳಸುವ ವಿಚಾರವಾಗಿ ಸಹೋದರರ ನಡುವೆ ನಡೆದ ಮಾರಾಮಾರಿಯಲ್ಲಿ ಚಿನ್ನಪ್ಪ (64) ಎಂಬುವರು ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ರಸ್ತೆಯಲ್ಲಿ ಶವವಿಟ್ಟು ಬುಧವಾರ ಪ್ರತಿಭಟನೆ ಮಾಡಿದರು.

ಚಿನ್ನಪ್ಪ ಅವರು ೧೫ ಗುಂಟೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಜಮೀನಿನ ಕೊಳವೆ ಬಾವಿಯಲ್ಲಿ ನೀರು ಬತ್ತಿದ ಕಾರಣ ಅವರು ಕೆರೆಯಲ್ಲಿ ಹೊಂಡ ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು ಕೃಷಿಗೆ ಬಳಸುತ್ತಿದ್ದರು. ಚಿನ್ನಪ್ಪರ ಏಳಿಗೆ ಸಹಿಸದ ಅವರ ತಮ್ಮ ಪಿಳ್ಳ ವೆಂಕಟೇಶಪ್ಪ ಅಣ್ಣನ ವಿರುದ್ಧವೇ ವೇಮಗಲ್ ಪೊಲೀಸ್ ಠಾಣೆಗೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಹಲವು ಬಾರಿ ದೂರು ಕೊಟ್ಟಿದ್ದ. ಈ ವಿಚಾರವಾಗಿ ಚಿನ್ನಪ್ಪ ಮತ್ತು ವೆಂಕಟೇಶಪ್ಪ ನಡುವೆ ಜಗಳವಾಗಿತ್ತು.

ಇದರಿಂದ ಕೋಪಗೊಂಡಿದ್ದ ವೆಂಕಟೇಶಪ್ಪ ತನ್ನ ಬೆಂಬಲಿಗರ ಮೂಲಕ ಫೆ.18ರಂದು ಚಿನ್ನಪ್ಪ ಅವರಿಗೆ ಕರೆ ಮಾಡಿ ಕೆರೆಯಂಗಳದ ಹೊಂಡದ ಬಳಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಚಿನ್ನಪ್ಪರ ರಕ್ಷಣೆಗೆ ಧಾವಿಸಿದ ಅವರ ಪತ್ನಿ ಗೌರಮ್ಮ ಮತ್ತು ಮಗನ ಮೇಲೂ ವೆಂಕಟೇಶಪ್ಪ ಹಾಗೂ ಬೆಂಬಲಿಗರು ಮಚ್ಚಿನಿಂದ ಹಲ್ಲೆ ಮಾಡಿದ್ದರು.

ADVERTISEMENT

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಿನ್ನಪ್ಪ ಮತ್ತು ಅವರ ಮಗ ಮಾದವ ಅವರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಚಿನ್ನಪ್ಪ ಬುಧವಾರ ಮೃತಪಟ್ಟರು. ಇದರಿಂದ ಆಕ್ರೋಶಗೊಂಡ ಚಿನ್ನಪ್ಪರ ಸಂಬಂಧಿಕರು ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದರು.

ರಸ್ತೆ ತಡೆ: ‘ವೇಮಗಲ್‌ ಠಾಣೆ ಎಸ್‌ಐ ಮತ್ತು ಸಿಬ್ಬಂದಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಘಟನೆ ಸಂಬಂಧ ಈವರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಪ್ರಕರಣ ಸಂಬಂಧ ನ್ಯಾಯಯುತ ತನಿಖೆ ನಡೆಸಬೇಕು. ಕರ್ತವ್ಯ ನಿರ್ಲಕ್ಷ್ಯ ತೋರಿರುವ ಎಸ್‌ಐ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಎಚ್‌.ಕ್ರಾಸ್ – ಚಿಂತಾಮಣಿ ಮುಖ್ಯರಸ್ತೆಯಲ್ಲಿ ಕೆಲ ಕಾಲ ರಸ್ತೆ ತಡೆ ಮಾಡಿದರು.

ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತವು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ‘ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ. ಜತೆಗೆ ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ. ವೇಮಗಲ್‌ ಠಾಣೆ ಸಿಬ್ಬಂದಿಯ ವಿಚಾರಣೆ ನಡೆಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.