ಕೋಲಾರ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ನಗರ ಹಾಗೂ ಗ್ರಾಮಾಂತರದಲ್ಲಿ ಮಂಗಳವಾರ ಭಕ್ತಿಭಾವದಿಂದ ಆಚರಿಸಲಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ನಾಗ ದೇವಸ್ಥಾನ, ಅಶ್ವಥಕಟ್ಟೆ, ನಾಗರಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಹುತ್ತಕ್ಕೆ ಹಾಲು ಎರೆದು ನೈವೇದ್ಯ ಸಮರ್ಪಿಸಿದರು. ಸೋದರರಿಗೆ ಆಯುರಾರೋಗ್ಯ ಬಯಸಿ ಶ್ರದ್ಧೆಭಕ್ತಿಯಿಂದ ಆಚರಿಸಿದರು.
ಮನೆಯಲ್ಲಿಯೇ ತಯಾರಿಸಿದ ಚಿಗಳಿ, ಅರಳಿಟ್ಟು, ತಂಬಿಟ್ಟು, ತಮಟ, ಕಡಲೆಕಾಳು, ತೆಂಗಿನಕಾಯಿ, ಬಾಳೆಹಣ್ಣು ಸೇರಿ ಇತರ ಪೂಜಾ ಸಾಮಗ್ರಿಗಳೊಂದಿಗೆ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಕೆಲವರು ದೇವರ ಕೋಣೆಯಲ್ಲಿಯ ಬೆಳ್ಳಿಯ ನಾಗದೇವತೆಗೆ ಹಾಲು ಎರೆದು ಭಕ್ತಿ ಸಮರ್ಪಿಸಿದರು. ದೋಷ ಪರಿಹಾರ ಮಾಡುವಂತೆ ಪ್ರಾರ್ಥಿಸಿದರು. ಬಳಿಕ ಹಬ್ಬದ ವಿಶೇಷ ಅಡುಗೆ ಸಿದ್ಧಪಡಿಸಿ ಸವಿದರು.
ನಗರದ ಕೆಇಬಿ ಕಾಲೊನಿಯ ವಿದ್ಯಾಗಣಪತಿ ದೇವಾಲಯದಲ್ಲಿನ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ನಗರದ ಕೆಇಬಿ ಗಣಪತಿ ದೇವಾಲಯ, ಪಿ.ಸಿ ಬಡಾವಣೆ, ವೇಣುಗೋಪಾಲಸ್ವಾಮಿ ಪುಷ್ಕರಣಿ ಸಮೀಪ, ಗಲ್‍ಪೇಟೆ, ಸಂತೆ ಮೈದಾನದ ಓಂಶಕ್ತಿ ದೇಗುಲದ ಆವರಣದಲ್ಲಿರುವ ನಾಗೇಶ್ವರಿ ದೇಗುಲ, ಮತ್ತಿತರ ಬಡಾವಣೆಗಳಲ್ಲಿರುವ ಅಶ್ವಥಕಟ್ಟೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದರು. ನಗರದ ವಿವಿಧ ದೇಗುಲಗಳನ್ನು ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ನಾಗರಪಂಚಮಿ ಪ್ರಯುಕ್ತ ಕೋಲಾರ ತಾಲ್ಲೂಕಿನ ತೋರದೇವಂಡಹಳ್ಳಿ ದೇಗುಲದಲ್ಲಿ ಭಕ್ತರ ವಿಶೇಷ ಪೂಜೆ ಸಲ್ಲಿಸಿದರು.
ನಾಗರಪಂಚಮಿ ಪ್ರಯುಕ್ತ ಮನೆಗೆ ಬರುವ ಸೋದರರ ಆರೋಗ್ಯ, ಐಶ್ವರ್ಯ ವೃದ್ಧಿಗೆ ಹರಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಸೋದರರು ಅರಿಸಿನ, ಕುಂಕುಮ ನೀಡಿ ಹರಸುವಂತೆ ನಾಗರಪಂಚಮಿಗೆ ಹೆಣ್ಣು ಮಕ್ಕಳು ತಮ್ಮ ಸೋದರರ ಬೆನ್ನಿಗೆ ಪೂಜೆ ಮಾಡಿ, ತುಳಸಿ, ಸೂಲರೆಂಬೆ ಎಲೆಯಿಂದ ಹೊಡೆದು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ, ಐಶ್ವರ್ಯ ನೀಡಲಿ ಎಂದು ಶುಭ ಕೋರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.