ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಸ್ನೇಹಿ

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 9:57 IST
Last Updated 18 ನವೆಂಬರ್ 2020, 9:57 IST
ಶಿಕ್ಷಕರ ಸಂಘಟನೆಗಳ ಮುಖಂಡರು ಕೋಲಾರದಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು.
ಶಿಕ್ಷಕರ ಸಂಘಟನೆಗಳ ಮುಖಂಡರು ಕೋಲಾರದಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು.   

ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿಯಾಗಿದ್ದು, ಇದರಿಂದ ಭವಿಷ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಶಿಕ್ಷಕರ ಸಂಘಟನೆಗಳು ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಶಿಕ್ಷಣ ನೀತಿ ರಚಿತವಾಗಿದೆ. ಇದರಿಂದ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

‘ಶಿಕ್ಷಣ ಎಂದರೆ ಅಂಕ ಗಳಿಕೆ ಮಾತ್ರವಲ್ಲ, ಜ್ಞಾನ ತುಂಬುವುದಾಗಿದೆ. ಶಿಕ್ಷಣದ ಜ್ಞಾನ ದೀವಿಗೆ ಮೂಲಕ ಯುವ ಪೀಳಿಗೆಗೆ ದಾರಿ ತೋರದಿದ್ದರೆ ದೇಶ ಕಷ್ಟಕ್ಕೆ ಸಿಲುಕುತ್ತದೆ. ಮೆಕಾಲೆ ಶಿಕ್ಷಣ ಪದ್ಧತಿಯ ದಾಸ್ಯದಿಂದ ಹೊರಬಂದು ಬಲಿಷ್ಠ ಭಾರತಕ್ಕಾಗಿ ಮೋದಿಯವರು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಶಿಕ್ಷಕರು ಸಜ್ಜಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದ ಪ್ರತಿಭಾವಂತ ಸಾಧಕರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಅವರಿಗೆ ದೇಶದಲ್ಲೇ ಬದುಕಲು ವೇದಿಕೆ ಕಲ್ಪಿಸುವ ರಾಷ್ಟ್ರೀಯ ಶಿಕ್ಷಣ ಪದ್ಧತಿಯು ಮೋದಿಯವರ ದೂರದೃಷ್ಟಿಯ ನಡೆ. ಮಕ್ಕಳಲ್ಲಿ ಜ್ಞಾನ ತುಂಬಬೇಕು. ಉತ್ತರದಾಯಿತ್ವ ಕೊಡುವ ಶಕ್ತಿ ತುಂಬಬೇಕು. ಅಂತಹ ಜೀವನ ಪರಿಕಲ್ಪನೆ ರೂಪಿಸುವ ಶಿಕ್ಷಣ ಬೇಕು’ ಎಂದರು.

‘ಮಕ್ಕಳಿಗೆ ಶಿಕ್ಷಣದಲ್ಲಿ ಅರಿವಿನ ಜತೆಗೆ ಕೌಶಲವು ಸಿಗಲಿದೆ. ಕಲಿಕೆ ಜತೆಗೆ ಬದುಕು ರೂಪಿಸಿಕೊಳ್ಳುವ ಶಿಕ್ಷಣ ಮೋದಿಯವರ ಕನಸಾಗಿದೆ. ಆ ಕನಸನ್ನು ರಾಜ್ಯದಲ್ಲಿ ನನಸು ಮಾಡಲು ಶಿಕ್ಷಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸ್ಪಂದಿಸುವೆ: ‘ರಾಜ್ಯದಲ್ಲಿ ನಡೆದ ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 4 ಕಡೆಯೂ ಬಿಜೆಪಿಗೆ ಗೆಲುವು ಸಿಕ್ಕಿದೆ. ಶಿಕ್ಷಕರು, ಪದವೀಧರರು ಮತ್ತು ಸರ್ಕಾರಿ ನೌಕರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಮತದಾರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ’ ಎಂದು ಭರವಸೆ ನೀಡಿದರು.

‘ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಚಿದಾನಂದಗೌಡರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ನನ್ನದಾಗಿತ್ತು. ಚಿದಾನಂದಗೌಡರ ಗೆಲುವು ನನ್ನ ಗೆಲುವಾಗಿದೆ. ಶಿಕ್ಷಕ, ಪದವೀಧರ ಮತದಾರರು ನನ್ನ ಮನವಿಗೆ ಸ್ಪಂದಿಸಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಮತದಾರರಿಗೆ ಚಿರಋಣಿ’ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ಸುರೇಶ್‌ಬಾಬು, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ಎಸ್.ಚೌಡಪ್ಪ, ಕೆಜಿಎಫ್‌ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ವಿವಿಧ ಶಿಕ್ಷಕರ ಸಂಘಟನೆಗಳ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.