ADVERTISEMENT

ಎನ್‌ಇಪಿ: ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು

ಶಿಕ್ಷಣ ವಿದ್ಯಾರ್ಥಿಗಳ ಅಂತರಾಳ ತಲುಪಲಿ: ಬೆಂಗಳೂರು ಉತ್ತರ ವಿ.ವಿ ಕುಲಪತಿ ನಿರಂಜನ ವಾನಳ್ಳಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 14:12 IST
Last Updated 18 ಫೆಬ್ರುವರಿ 2022, 14:12 IST
ಹೊಸ ಶಿಕ್ಷಣ ನೀತಿ-2020ರಲ್ಲಿ ವಾಣಿಜ್ಯ ಶಾಸ್ತ್ರ ಪಠ್ಯಕ್ರಮ ವಿನ್ಯಾಸ ಕುರಿತು ಕೋಲಾರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಪತಿ ನಿರಂಜನ ವಾನಳ್ಳಿ ಪಾಲ್ಗೊಂಡರು
ಹೊಸ ಶಿಕ್ಷಣ ನೀತಿ-2020ರಲ್ಲಿ ವಾಣಿಜ್ಯ ಶಾಸ್ತ್ರ ಪಠ್ಯಕ್ರಮ ವಿನ್ಯಾಸ ಕುರಿತು ಕೋಲಾರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಪತಿ ನಿರಂಜನ ವಾನಳ್ಳಿ ಪಾಲ್ಗೊಂಡರು   

ಕೋಲಾರ: ‘ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಗೊಳಿಸುವ ಮೂಲಕ ಕೌಶಲಾಭಿವೃದ್ಧಿಗೆ ಒತ್ತು ನೀಡಿ ಸಮಗ್ರ ಬದಲಾವಣೆಯೊಂದಿಗೆ ಶಿಕ್ಷಣವು ವಿದ್ಯಾರ್ಥಿಗಳ ಅಂತರಾಳ ತಲುಪುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಕಿವಿಮಾತು ಹೇಳಿದರು.

ಹೊಸ ಶಿಕ್ಷಣ ನೀತಿ-2020ರಲ್ಲಿ ವಾಣಿಜ್ಯ ಶಾಸ್ತ್ರ ಪಠ್ಯಕ್ರಮ ವಿನ್ಯಾಸ ಕುರಿತು ವಿ.ವಿಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರ ಪರಿಷತ್ ವತಿಯಿಂದ ತಾಲ್ಲೂಕಿನ ಬೆಳ್ಳೂರು ಗ್ರಾಮದ ರಮಾಮಣಿ ಸುಂದರರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಕಾಲೇಜು ಉಪನ್ಯಾಸಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ವಾಟಿಸಿ ಮಾತನಾಡಿದರು.

‘ಹೊಸ ಶಿಕ್ಷಣ ನೀತಿಯ ಯಶಸ್ಸು ನಿಂತಿರುವುದು ಶಿಕ್ಷಕರು ಮತ್ತು ಅಧ್ಯಾಪಕರ ಮೇಲೆ. ಅದನ್ನು ಹೇಗೆ ವಿದ್ಯಾರ್ಥಿಗಳಿಗೆ ತಲುಪಿಸಿ ಸಮಗ್ರ ಬದಲಾವಣೆ ತರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ವಿದ್ಯಾರ್ಥಿಗಳ ಅಂತರಾಳಕ್ಕೆ ತಲುಪುವಂತೆ ಮಾಡದಿದ್ದರೆ ಹೊಸ ಶಿಕ್ಷಣ ನೀತಿ ವಿಫಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಎನ್‌ಇಪಿ ಜಾರಿಯ ಆರಂಭದಲ್ಲಿಯೇ ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಪಠ್ಯಪುಸ್ತಕಗಳು ಹೇಗೆ ಇರಲಿ ಅದನ್ನು ಮಕ್ಕಳಿಗೆ ತಲುಪಿಸಲು ಸಿದ್ಧರಾಗಬೇಕು. ಭಾರತವನ್ನು ವಿಶ್ವದ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿಯತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ನಿರ್ಣಾಯಕ ಪಾತ್ರ: ‘ದೇಶದಲ್ಲಿ ಹೊಸ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಅಧ್ಯಾಪಕರ ಪಾತ್ರ ನಿರ್ಣಾಯಕ. ಯಾವುದೇ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಆ ದೇಶದ ಶಿಕ್ಷಣ ವ್ಯವಸ್ಥೆ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಾಯೋಗಿಕವಾಗಿ ಅರಿತು ಪ್ರಾಮಾಣಿಕವಾಗಿ ಜಾರಿ ಮಾಡಬೇಕು’ ಎಂದರು.

‘ಭಾರತವನ್ನು 4ನೇ ಔದ್ಯೋಗಿಕ ಕ್ರಾಂತಿಗೆ ಸಿದ್ಧಪಡಿಸುವ ಧ್ಯೇಯದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. 2031ರ ವೇಳೆಗೆ ಶೇ 51ರಷ್ಟು ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ಅನುಷ್ಠಾನಗೊಳ್ಳುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೂ ಇಂಟರ್ನ್‌ಶಿಪ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುತ್ತದೆ ಮತ್ತು ಕೌಶಲ ವೃದ್ದಿಯಾಗುತ್ತದೆ’ ಎಂದು ಹೇಳಿದರು.

ಪ್ರಾಯೋಗಿಕ ಕಲಿಕೆ: ‘ದೇಶದಲ್ಲಿ ಕೋವಿಡ್ ಬಂದ ನಂತರ ಎಲ್ಲಾ ಕ್ಷೇತ್ರದಲ್ಲೂ ಸಮಸ್ಯೆ ಅನುಭವಿಸುವಂತಾಗಿದೆ. ಇದರಲ್ಲಿ ಶಿಕ್ಷಣ ಕ್ಷೇತ್ರವು ಹೊರತಾಗಿಲ್ಲ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಬಿಕೆಎಸ್‍ಎಸ್‍ಎನ್ ಟ್ರಸ್ಟ್ ಉಪಾಧ್ಯಕ್ಷ ಬಿ.ಎಸ್‌.ರಾಮಪ್ರಸಾದ್‌ ಅಭಿಪ್ರಾಯಪಟ್ಟರು.

‘ಕೆಲ ಸಂದರ್ಭಗಳಲ್ಲಿ ಆನ್‍ಲೈನ್ ಶಿಕ್ಷಣ ಗುಣಮಟ್ಟ ಕಳೆದುಕೊಂಡಿದೆ. ಇಂತಹ ಸವಾಲುಗಳನ್ನು ಎದುರಿಸಿ ಅರ್ಥಪೂರ್ಣವಾದ ಶಿಕ್ಷಣ ಸಿಗಬೇಕಾದರೆ ಶಿಕ್ಷಕರು ಕೌಶಲ ಶಿಕ್ಷಣದ ಜತೆಯಲ್ಲಿ ಹೆಚ್ಚು ಪ್ರಾಯೋಗಿಕವಾಗಿ ಕಲಿಕೆ ಮಾಡಿಸಬೇಕು’ ಎಂದು ಸೂಚಿಸಿದರು.

‘ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ದೊಡ್ಡ ಸವಾಲು ಎದುರಿಸಬೇಕಿದೆ. ಜತೆಗೆ ಸಮರ್ಪಕವಾಗಿ ಜಾರಿ ಮಾಡಲು ಅಷ್ಟೇ ಅವಕಾಶಗಳು ಕಣ್ಣ ಮುಂದಿವೆ. ಮಕ್ಕಳನ್ನು ಭಯದ ವಾತಾವರಣದಿಂದ ಬಿಡುಗಡೆಗೊಳಿಸಿ ದೇಶದ ಮತ್ತು ಮನುಷ್ಯನ ಅಭಿವೃದ್ಧಿಗೆ ಗಂಭೀರವಾಗಿ ಶಿಕ್ಷಣ ವ್ಯವಸ್ಥೆ ಎಂದು ಪರಿಗಣಿಸಬೇಕು. ಆಗ ಮಾತ್ರ ಯಾವುದೇ ಯೋಜನೆ ಮತ್ತು ನೀತಿ ಸಮರ್ಪಕವಾಗಿ ಜಾರಿ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಎನ್‌ಇಪಿ ಜಾರಿ ಸಮಿತಿ ಸದಸ್ಯ ಗೌರೀಶ್, ಸಂಪನ್ಮೂಲ ವ್ಯಕ್ತಿಗಳಾದ, ಡಾ.ನರೇಂದ್ರ, ಪ್ರೊ.ಜಿ.ಬಿ.ಭಾಗ್ಯ, ಪ್ರೊ.ಎಸ್.ಎ.ಜಗದೀಶ್ ಉಪನ್ಯಾಸ ನೀಡಿದರು. ರಮಾಮಣಿ ಕಾಲೇಜಿನ ಟ್ರಸ್ಟಿ ಬಿ.ರಘು, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಅಧ್ಯಕ್ಷ ಮುರಳಿಧರ್, ರಮಾಮಣಿ ವಿದ್ಯಾ ಸಂಸ್ಥೆ ಪ್ರಾಂಶುಪಾಲೆ ಛಾಯಾದೇವಿ, ಪ್ರೌಢ ಶಾಲಾ ವಿಭಾಗದ ಪ್ರಾಂಶುಪಾಲೆ ಗಿರಿಜಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.