ಕೋಲಾರ: ಸಾಹಿತಿ, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಚಿಂತನೆಗೆ ಭಾನುವಾರ ಚಾಲನೆ ದೊರೆತಿದೆ.
ಈ ಉದ್ದೇಶಕ್ಕಾಗಿ ಬುಡ್ಡಿ ದೀಪ ಆಶ್ರಯದಲ್ಲಿ ಭಾನುವಾರ ನಗರದ ನಚಿಕೇತ ನಿಲಯ ಆವರಣದ ಬುದ್ಧ ಮಂದಿರದಲ್ಲಿ ‘ಪ್ರತಿರೋಧದ ದನಿಗಳು’ ಅಡಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರದಿಂದ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ತಾತ್ಕಾಲಿಕವಾಗಿ ಸಮಿತಿಯೊಂದನ್ನು ರಚಿಸಲಾಯಿತು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಿಟ್ಟಿರುವ ವಿಶೇಷ ಘಟಕದ ಹಣವನ್ನು ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಪಲ್ಲಟಗೊಳಿಸಿರುವುದನ್ನು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ಖಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಎಲ್ಲಾ ರಾಜಕೀಯ ಪಕ್ಷಗಳು ಈ ನೆಲದ ನೋವು ಮರೆತಿರುವ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪಕ್ಷ ಹಾಗೂ ಪರ್ಯಾಯ ರಾಜಕಾರಣದ ಅಗತ್ಯವಿದೆ. ಈ ಸಂಬಂಧ ದೊಟ್ಟಮಟ್ಟದಲ್ಲಿ ಚರ್ಚೆ, ಸಂವಾದ, ಜಾಗೃತಿ ನಡೆಯಬೇಕಿದೆ’ ಎಂದು ಪ್ರತಿಪಾದಿಸಿದರು.
‘ಹಲವಾರು ವರ್ಷಗಳಿಂದ ಪರ್ಯಾಯ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದೇವೆ. ಈ ವರೆಗೆ ನಮಗೆ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಆದರೆ, ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಿದೆ. ಅದಕ್ಕೆ ಸಾಣೆ ಹಿಡಿಯಬೇಕು. ಈ ಮೂಲಕ ಪರ್ಯಾಯ ರಾಜಕೀಯ ಮಾರ್ಗ ಕಂಡುಕೊಳ್ಳಬೇಕಿದೆ’ ಎಂದು ಪ್ರೊ.ಹರಿರಾಂ ಹೇಳಿದರು.
‘ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ತರಲು ನಾವು ಮತ ಬ್ಯಾಂಕ್ ಆಗಿದ್ದೇವೆ. ಆದರೆ, ನಮ್ಮ ಬದುಕು ರೂಪಿಸಿಕೊಳ್ಳುವ ಶಕ್ತಿ ಬೆಳೆಸಿಕೊಂಡಿಲ್ಲ. ನೀತಿ ರೂಪಿಸುವಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೇ ಪರ್ಯಾಯ ಪಕ್ಷ ಕಟ್ಟುವ ಅಗತ್ಯವಿದೆ’ ಎಂದರು.
‘ರಾಜ್ಯದಲ್ಲಿ ಬಿಎಸ್‌ಪಿ ಶಕ್ತಿ ಕಳೆದುಕೊಂಡಿದೆ. ಜೆಡಿಎಸ್ ಪಕ್ಷದವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿದ್ದಾರೆ. ಮೂರೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಕಾಣುತ್ತಿದ್ದೇವೆ, ಹಣದ ಶಕ್ತಿಯೊಂದೇ ಕೆಲಸ ಮಾಡುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕಿದೆ’ ಎಂದು ಮುಖಂಡ ಸೋಸಲೆ ಸಿದ್ದರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.