ADVERTISEMENT

ಆರತಕ್ಷತೆಯಲ್ಲಿ ಕುಸಿದುಬಿದ್ದು ವಧು ಸಾವು: ಅಂಗಾಂಗ ದಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:44 IST
Last Updated 12 ಫೆಬ್ರುವರಿ 2022, 20:44 IST
ಕೆ.ಆರ್.ಚೈತ್ರಾ
ಕೆ.ಆರ್.ಚೈತ್ರಾ   

ಶ್ರೀನಿವಾಸಪುರ (ಕೋಲಾರ ಜಿಲ್ಲೆ): ಶ್ರೀನಿವಾಸಪುರ ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಆರು ದಿನಗಳ ಹಿಂದೆ ಆರತಕ್ಷತೆ ವೇಳೆ ವೇದಿಕೆಯಲ್ಲಿಯೇ ಕುಸಿದುಬಿದ್ದಿದ್ದ ಮದುಮಗಳು ಮಿದುಳು ನಿಷ್ಕ್ರಿಯಗೊಂಡ ಕಾರಣ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ.

ಕೈವಾರ ಸಮೀಪ ಬಿಜಿಎಸ್ ಕಾಲೇಜಿನ ಉಪನ್ಯಾಸಕಿಯಾಗಿದ್ದ 26 ವರ್ಷದ ಎಂ.ಎಸ್ಸಿ ಪದವೀಧರೆ ಕೆ.ಆರ್‌. ಚೈತ್ರಾ ಅವರ ಮದುವೆಹೊಸಕೋಟೆಯ ಯುವಕನೊಂದಿಗೆ ಫೆ.7ರಂದು ಇಲ್ಲಿಯಮಾರುತಿ ಸಭಾ ಭವನದಲ್ಲಿ ನಡೆಯಬೇಕಾಗಿತ್ತು. ಆದರ ಹಿಂದಿನ ದಿನ (ಫೆ. 6ರಂದು) ನಡೆದ ಆರತಕ್ಷತೆ ವೇಳೆ ಚೈತ್ರಾ ಏಕಾಏಕಿ ನಿಂತಲ್ಲೇ ಕುಸಿದು ಬಿದ್ದಿದ್ದರು.

ಸುಸ್ತಿನಿಂದ ತಲೆಸುತ್ತಿ ಬಿದ್ದಿರಬಹುದೆಂದು ತಿಳಿದ ಕುಟುಂಬ ಸದಸ್ಯರು ನೀರು ಕುಡಿಸಿ,ಗಾಳಿ ಬೀಸಿದರು. ಚೈತ್ರಾ ಕಣ್ಣು ತೆರೆಯದ ಕಾರಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದುಚಿಕಿತ್ಸೆ ಕೊಡಿಸಲಾಗಿತ್ತು. ನಂತರ ವೈದ್ಯರ ಸಲಹೆಯಂತೆಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ADVERTISEMENT

‘ಚೈತ್ರಾ ಅವರನ್ನು ಪರೀಕ್ಷಿಸಿದ ನಿಮ್ಹಾನ್ಸ್‌ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದರು. ನಮ್ಮ ಸಂಬಂಧಿಯಾದ ಡಾ.ರಾಜೇಶ್ ಮತ್ತುಡಾ.ವೈ.ವಿ.ವೆಂಕಟಾಚಲ ಅವರು ಕುಟುಂಬದ ಸದಸ್ಯರ ಜತೆ ಚರ್ಚಿಸಿ ಅಂಗಾಂಗ ದಾನಕ್ಕೆ ಎಲ್ಲರನ್ನು ಒಪ್ಪಿಸಿದರು’ ಎಂದು ಯುವತಿಯ ದೊಡ್ಡಪ್ಪ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರ ಚೈತ್ರಾ ಅವರ ಕಣ್ಣು, ಮೂತ್ರಪಿಂಡ, ಹೃದಯ ಕವಾಟಗಳನ್ನು ವೈದ್ಯರು ಪಡೆದರು.ಅಕ್ಕೆಮ್ಮ ಮತ್ತು ಕೆ.ವಿ.ರಾಮಪ್ಪ ಅವರ ಒಬ್ಬಳೇ ಮಗಳಾಗಿದ್ದ ಚೈತ್ರಾ ಅವರ ಅಂತ್ಯಕ್ರಿಯೆ ಶನಿವಾರ ಕೊಡಿಚೆರುವ ಗ್ರಾಮದಲ್ಲಿ ನಡೆಯಿತು.

‘ಚೈತ್ರಾ ಅವರ ಅಂಗಾಂಗಗಳನ್ನು ದಾನ ಮಾಡಿರುವುದು ಸ್ಪೂರ್ತಿ ನೀಡುವ ಘಟನೆಯಾಗಿದ್ದು, ಇದು ಇಡೀ ಸಮಾಜಕ್ಕೆ ಉತ್ತಮ ನಿದರ್ಶನ. ಆಕೆಯು ವೈವಾಹಿಕ ಜೀವನದ ಸಂಭ್ರಮದ ಹೊಸ ಹೆಜ್ಜೆಯನ್ನು ಇರಿಸುವ ವೇಳೆಯಲ್ಲೇ ಇಂತಹಘಟನೆ ನಡೆದಿರುವುದು ವಿಷಾದನೀಯ. ನೋವಿನಲ್ಲಿಯೂ ಕುಟುಂಬದವರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿರುವುದಕ್ಕೆ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.