ADVERTISEMENT

10ಕ್ಕೆ ಕೋಲಾರದಲ್ಲಿ ಜೆಎಡಿಎಸ್‌ ಸಮಾವೇಶ

ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರ್‌ ನೇತೃತ್ವದಲ್ಲಿ ಬೈಕ್‌ ರ‍್ಯಾಲಿ: ಸಿಎಆರ್‌ ಶ್ರೀನಾಥ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:49 IST
Last Updated 9 ಜುಲೈ 2025, 2:49 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಮಾತನಾಡಿದರು. ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಮಾತನಾಡಿದರು. ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಪಾಲ್ಗೊಂಡಿದ್ದರು   

ಕೋಲಾರ: ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ರಾಜ್ಯದಾದ್ಯಂತ 60 ದಿನ ಪ್ರವಾಸ ಕೈಗೊಂಡಿರುವ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ 10ರಂದು ಬಂಗಾರಪೇಟೆ ಹಾಗೂ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘10ರಂದು ಬೆಳಿಗ್ಗೆ 10 ಗಂಟೆ ಬಂಗಾರಪೇಟೆಗೆ ಬರಲಿದ್ದು, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಕೋಲಾರದಲ್ಲಿ ಬೈಕ್ ರ‍್ಯಾಲಿ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ರ‍್ಯಾಲಿಯಲ್ಲಿ ಸುಮಾರು 800 ಬೈಕ್‍ಗಳು ಪಾಲ್ಗೊಳ್ಳಲಿದ್ದು, ಸಾಯಿಬಾಬಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಬಂಗಾರಪೇಟೆ ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಬೈರೇಗೌಡ ನಗರದ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆಯಿದೆ’ ಎಂದು ಹೇಳಿದರು.

ADVERTISEMENT

‘ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ರಾಜ್ಯ, ಜಿಲ್ಲೆಯ ನಾಯಕರು, ಸ್ಥಳೀಯ ಸಂಸ್ಥೆಗಳ ಹಾಲಿ-ಮಾಜಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ಮಿಸ್ಡ್‌ ಕಾಲ್ ನೋಂದಣಿ ಸದಸ್ಯತ್ವ ಕಾರ್ಯಕ್ರಮವೂ ನಡೆಯಲಿದೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮಿತಿಮೀರಿದೆ. ರೈತ, ಮಹಿಳಾ ವಿರೋಧಿ ನೀತಿಗಳನ್ನು ಜನರು ಈಗಾಗಲೇ ಖಂಡಿಸಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಪೂರಕ ವಾತಾವರಣ ನಿರ್ಮಾಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆದ ಗೆಲುವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿಕ್ಸೂಚಿಯಾಗಿದೆ. 2028ಕ್ಕೆ ಜೆಡಿಎಸ್‌ ಸರಕಾರ ರಚನೆ ಲಕ್ಷಣ ಕಾಣಿಸುತ್ತಿದೆ’ ಎಂದು ತಿಳಿಸಿದರು.

‘ಚುನಾವಣೆ ಬಳಿಕ ನಾವು ತಟಸ್ಥವಾಗಿಲ್ಲ. ಪಕ್ಷ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಕಾರ್ಯಕರ್ತರು ಕ್ರಿಯಾಶೀಲವಾಗಿದ್ದಾರೆ. ನಿಖಿಲ್ ಪ್ರಬುದ್ಧ ರಾಜಕಾರಣಿಯಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ರಾಜಕಾರಣಿ ಆಗಲಿದ್ದಾರೆ. ಪಕ್ಷ ಪುನಶ್ಚೇತನದ ನಿಟ್ಟಿನಲ್ಲಿ ನಿಖಿಲ್ ಭೇಟಿ ನೀಡುತ್ತಿದ್ದು, ಪಕ್ಷದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು’ ಎಂದು ಕೋರಿದರು.

ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿ, ‘ಜಿಲ್ಲೆಯಲ್ಲೂ ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ತಳಮಟ್ಟದಲ್ಲಿ ಚೆನ್ನಾಗಿದೆ. ನಿಖಿಲ್‌ ಕುಮಾರಸ್ವಾಮಿ ಭೇಟಿ, ಸಮಾವೇಶದಿಂದ ಮತ್ತಷ್ಟು ಗಟ್ಟಿಯಾಗಲಿದೆ’ ಎಂದರು.

‘ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಬದಲಾವಣೆಗಳಾಗಲಿವೆ. ಕಾರ್ಯಕರ್ತರ ಸಲಹೆ, ಸೂಚನೆಗಳಂತೆ ಎಲ್ಲವೂ ನಡೆಯಲಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್ ಮುಖಂಡರಾದ ಬಣಕನಹಳ್ಳಿ ನಟರಾಜ್, ಬಾಬುಮೌನಿ, ಶಬರೀಶ್ ಯಾದವ್, ವಿ.ಕೆ.ರಾಜೇಶ್, ವೆಂಕಟೇಶ್ ಇದ್ದರು.

ಕಾಂಗ್ರೆಸ್‌ ಹಣದ ಪ್ರಭಾವ; ನಮಗೆ ಹಿನ್ನಡೆ

‘ಆಡಳಿತ ಪಕ್ಷ ಕಾಂಗ್ರೆಸ್‌ನ ಹಣದ ಪ್ರಭಾವ ಸರ್ಕಾರದ ಒತ್ತಡದಿಂದಲೇ ಕೋಮುಲ್ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್‍ನವರು ಆಡಳಿತ ಅಧಿಕಾರ ದಬ್ಬಾಳಿಕೆ ಮಾಡಿ ಡೆಲಿಗೇಟ್‌ಗಳಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ದೂರಿದರು. ‘ಆ ನಡುವೆಯೂ ನಮ್ಮ ನಾಲ್ಕು ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ’ ಎಂದರು. ‘ಆರಂಭದಿಂದಲೂ ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಹೇಳುತ್ತಲೇ ಇದ್ದಾರೆ. ಆದರೆ ಯಾವ ಶಾಸಕರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಎಚ್‌ಡಿಕೆ ಸಚಿವರಾಗಿದ್ದು ನಿಖಿಲ್‌ಗೆ ಜವಾಬ್ದಾರಿ ‘

ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಜೆಡಿಎಸ್‌ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ಮೊದಲಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ’ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು. ‘ಕುಮಾರಸ್ವಾಮಿ ಅವರಿಗೆ ಸಿಗುವುದಕ್ಕಿಂತ ಹೆಚ್ಚು ನಿಖಿಲ್‍ ಅವರಿಗೆ ಜನಸ್ಪಂದನೆ ಸಿಗುತ್ತಿದೆ. ವಿರೋಧ ಪಕ್ಷದವರ ಟೀಕೆ ಸಾಮಾನ್ಯ. ಯುವ ನಾಯಕರೊಂದಿಗೆ ತೆರಳುವುದು ಸೂಕ್ತ ಎನ್ನುವುದನ್ನು ಜನರು ಅರಿತಿದ್ದಾರೆ. ಉತ್ತರ ಕರ್ನಾಟಕದಲ್ಲಿ 2 ಜಿಲ್ಲೆ ಈ ಭಾಗದಲ್ಲಿ 2 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ನಿಖಿಲ್ ಓಡಾಡುತ್ತಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.