ADVERTISEMENT

ಮುಳಬಾಗಿಲು: ಬರಡು ಜಿಲ್ಲೆಗೆ ಶಾಪವಾದ ಸರ್ಕಾರಿ ತೋಪಿನಲ್ಲಿನ 3,267 ಎಕರೆ ನೀಲಗಿರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:08 IST
Last Updated 6 ಫೆಬ್ರುವರಿ 2021, 5:08 IST
ಮುಳಬಾಗಿಲು ತಾಲ್ಲೂಕು ಹರಪನಾಯಕನಹಳ್ಳಿ ಮತ್ತು ಮಂಡಿಕಲ್ ಗ್ರಾಮಗಳ ನಡುವೆ ಇರುವ ನೀಲಗಿರಿ ತೋಪು
ಮುಳಬಾಗಿಲು ತಾಲ್ಲೂಕು ಹರಪನಾಯಕನಹಳ್ಳಿ ಮತ್ತು ಮಂಡಿಕಲ್ ಗ್ರಾಮಗಳ ನಡುವೆ ಇರುವ ನೀಲಗಿರಿ ತೋಪು   

ಮುಳಬಾಗಿಲು: ಅಂತರ್ಜಲಮಟ್ಟ ಕುಸಿಯಲು ಕಾರಣವಾಗಿರುವ ನೀಲಗಿರಿಯನ್ನು ನಿಷೇಧ ಮಾಡಬೇಕೆಂಬ ಆದೇಶವಿದ್ದರೂ ನೂರಾರು ಎಕರೆ ಖಾಸಗಿ ಹಾಗೂ ಸರ್ಕಾರಿ ಅರಣ್ಯ ಪ್ರದೇಶಗಳಲ್ಲಿ ಮರವನ್ನು ನೋಡಬಹುದಾಗಿದೆ.

ಸುಮಾರು 15 ಸಾವಿರ ಎಕರೆ ಜಮೀನಿನಲ್ಲಿ ನೀಲಗಿರಿ ಬೆಳೆಯಲಾಗಿದೆ. ಇದರಲ್ಲಿ ಬರೀ ಮೂರು ಸಾವಿರ ಎಕರೆಯಷ್ಟು ತೆರವುಗೊಳಿಸಲಾಗಿದೆ. ನೀಲಗಿರಿ ಮರಗಳು ಅಂತರ್ಜಲಕ್ಕೆ ಕಂಟಕವಾಗಿದ್ದು ಅಂತರ್ಜಲ ಹೆಚ್ಚಳಕ್ಕೆ ನೀಲಗಿರಿ ಮರಗಳನ್ನು ಬುಡಸಮೇತ ತೆರವುಗೊಳಿಸಬೇಕು ಎಂದು ಈ ಹಿಂದೆ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬೆರಳೆಣಿಕೆಯಷ್ಟು ರೈತರು ಮಾತ್ರ
ತೆರವುಗೊಳಿಸಿದ್ದಾರೆ.

ಅರಣ್ಯ ಇಲಾಖೆ ಅಧೀನದಲ್ಲಿಯೇ ಇರುವ ಗೋಮಾಳ, ಗೋಕುಂಟೆ ಅರಣ್ಯ ಪ್ರದೇಶದಲ್ಲಿ 3,267 ಎಕರೆ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಬೆಳೆ ಇದೆ. ಇದುವರೆಗೆ ಹೆಚ್ಚಿನ ಎಕರೆ ಮರ ತೆರವುಗೊಳಿಸಲಾಗಿಲ್ಲ ಎನ್ನುತ್ತಾರೆ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್.

ADVERTISEMENT

ಗಂಧದ ಮರಗಳನ್ನು ಬೆಳೆಯಲು ಕೃಷಿ, ತೋಟಗಾರಿಕೆ ಇಲಾಖೆಗಳು ಶ್ರಮಿಸಬೇಕಿದೆ. ನೀಲಗಿರಿಯ ಕಾರಣದಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು 1,800 ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ ಇದಕ್ಕೆ ನೀಲಗಿರಿ ಕಾರಣ ಎನ್ನುತ್ತಾರೆ ಪ್ರಭಾಕರ್‌.

ಖಾಸಗಿ ಜಮೀನುಗಳಲ್ಲಿನ ನೀಲಗಿರಿ ಬೆಳೆಗಳ ಕುರಿತು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಗ್ರಾಮವಾರು ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಅನುಮತಿ ಪಡೆದು ನೀಲಗಿರಿ ಬೆಳೆದಿರುವ ರೈತರನ್ನು ಸಂಪರ್ಕಿಸಿ ನೀಲಗಿರಿ ತೆರವುಗೊಳಿಸಿ ಪರ್ಯಾಯವಾಗಿ ಶ್ರೀಗಂಧ ಬೆಳೆಯುವಂತೆ ಮನವೊಲಿಸಲಾಗುವುದು ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.