ADVERTISEMENT

ಸರ್ಕಾರದಲ್ಲಿ ಗೊಂದಲವಿಲ್ಲ: ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:28 IST
Last Updated 29 ಮೇ 2020, 14:28 IST
ಕೋಲಾರ ಸಂಸದ ಮುನಿಸ್ವಾಮಿ
ಕೋಲಾರ ಸಂಸದ ಮುನಿಸ್ವಾಮಿ   

ಕೋಲಾರ: ‘ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಗೊಂದಲವಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಪ್ರಶಂಸಗೆ ಪಾತ್ರವಾಗಿದೆ’ ಎಂದು ತಿಳಿಸಿದರು.

‘ವಿಪಕ್ಷ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ ಏನೆಂದು ಜನರಿಗೆ ಗೊತ್ತಿದೆ. ಯಡಿಯೂರಪ್ಪ ಅವರು 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯವಿದ್ದರೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಸರಿಪಡಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಆದರೆ, ಕೆಲ ರಾಜ್ಯ ಸರ್ಕಾರಗಳು ಕೇಂದ್ರದ ಆದೇಶ ಪಾಲಿಸದೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಸೋಕಿತರ ಸಂಖ್ಯೆ ಹೆಚ್ಚುತ್ತಿದೆ. ಜನರು ಪರಿಸ್ಥಿತಿಯ ಗಂಭೀರತೆ ಅರಿತು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಒತ್ತುವರಿ ತೆರವು: ‘ಕೋಲಾರಮ್ಮ ಕೆರೆಯ ಮಾದರಿಯಲ್ಲೇ ಕೋಡಿಕಣ್ಣೂರು ಕೆರೆ ಸ್ವಚ್ಛಗೊಳಿಸಲಾಗುತ್ತಿದೆ. ಕೆರೆಯ ಬಹುತೇಕ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆರೆ ಅಂಗಳದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದು, ಆ ಮನೆಗಳನ್ನು ಮುಲಾಜಿಲ್ಲದೆ ತೆರವು ಮಾಡುತ್ತೇವೆ’ ಎಂದರು.

‘ಕೋಡಿಕಣ್ಣೂರು ಕೆರೆಯಲ್ಲಿ 3 ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಮರಳು ದಂಧೆಕೋರರು ಅಕ್ರಮ ಮರಳು ದಂಧೆ ನಡೆಸಿ ಕೆರೆಯ ಸ್ವರೂಪ ಹಾಳು ಮಾಡಿದ್ದಾರೆ. ಕೆರೆ ಸ್ವಚ್ಛ ಮಾಡಿದರೆ ಮಳೆ ಬಂದಾಗ ತುಂಬಿಕೊಳ್ಳುತ್ತದೆ. ಇದರಿಂದ ಮರಳು ದಂಧೆಗೆ ಕಡಿವಾಣ ಬೀಳುತ್ತದೆ’ ಎಂದುಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.