ADVERTISEMENT

ಮುಖಂಡರ ವಿರುದ್ಧ ಡಿ.ಸಿ ಸಿಡಿಮಿಡಿ

ಅಧಿಕಾರಿಗಳ ವಿರುದ್ಧ ವಿನಾಕಾರಣ ಆರೋಪ ಬೇಡ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:36 IST
Last Updated 20 ಜುಲೈ 2019, 14:36 IST
ರಸ್ತೆಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಸಂಬಂಧ ಕೋಲಾರದಲ್ಲಿ ಶನಿವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ರಸ್ತೆಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಸಂಬಂಧ ಕೋಲಾರದಲ್ಲಿ ಶನಿವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.   

ಕೋಲಾರ: ‘ಅಧಿಕಾರಿಗಳ ವಿರುದ್ಧ ವಿನಾಕಾರಣ ಆರೋಪ ಮಾಡಿದರೆ ಭವಿಷ್ಯದಲ್ಲಿ ಕರೆ ಮಾಡಿ ದೂರು ನೀಡುವುದಕ್ಕೂ ನಿಮಗೆ ಅಧಿಕಾರಿಗಳು ಸಿಗಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಶಾಸಕರು ಹಾಗೂ ಸಂಸದರ ಎದುರೇ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಂಗಾರಪೇಟೆ ರಸ್ತೆ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ‘ನಗರಸಭೆ ವ್ಯಾಪ್ತಿಯ ಬಹುಪಾಲು ಕಾಮಗಾರಿಗಳನ್ನು ಆಂಧ್ರಪ್ರದೇಶ ಮೂಲದ ಗುತ್ತಿಗೆದಾರರಿಗೆ ನೀಡಲಾಗಿದೆ’ ಎಂದು ಆರೋಪಿಸಿದರು.

‘ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 1.50 ಲಕ್ಷ ಜನಸಂಖ್ಯೆಯಿದೆ. ನಗರ ಇಷ್ಟು ದೊಡ್ಡದಾಗಿ ಬೆಳೆದಿದ್ದರೂ ನಗರಸಭೆಯಲ್ಲಿ ಕೇವಲ ಇಬ್ಬರು ಎಂಜಿನಿಯರ್‌ಗಳಿದ್ದಾರೆ. ಈ ಪೈಕಿ ಇಂದಿನ ಸಭೆಗೆ ಒಬ್ಬರೇ ಎಂಜಿನಿಯರ್‌ ಬಂದಿದ್ದಾರೆ. ಇದಕ್ಕೆ ಕಾರಣವೇನು?’ ಎಂದು ಪ್ರಶ್ನಿಸಿದರು.

ಇದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ನಿಮ್ಮ ಪ್ರಶ್ನೆಗೆ ಉತ್ತರ ಹೇಳಬೇಕೇ. ಎಲ್ಲವೂ ನನಗೆ ಗೊತ್ತಿದೆ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಚೆನ್ನಾಗಿ ತಿಳಿದಿದೆ. 5 ಬೆರಳು ಒಂದೇ ಸಮನಾಗಿ ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ತಪ್ಪಿತಸ್ಥರ ಬಗ್ಗೆ ಬಳಿ ದಾಖಲೆಪತ್ರವಿದ್ದರೆ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ಕೊಡಿ. ಅದು ಬಿಟ್ಟು ಸಂಬಂಧಪಡದ ವಿಷಯವನ್ನು ಸಭೆಯಲ್ಲಿ ಯಾಕೆ ಪ್ರಸ್ತಾಪಿಸುತ್ತೀರಿ?’ ಎಂದು ತಿರುಗೇಟು ನೀಡಿದರು.

‘ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೋಲಾರವು 70 ಕಿ.ಮೀ ದೂರದಲ್ಲಿದ್ದರೂ ಇಲ್ಲಿ ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳೇ ಇಲ್ಲ. ಇರುವ ಬೆರಳೆಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಕ್ಕದ ಜಿಲ್ಲೆಗಳಿಗೆ ಹೋಗಲು ಬಯಸುತ್ತಾರೆ. ಇದಕ್ಕೆ ಕಾರಣ ಏನು, ಇದರ ಹಿಂದೆ ಯಾರಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿದೆ. ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ’ ಎಂದು ಸಿಡಿಮಿಡಿಗೊಂಡರು.

ಹಿಂದೇಟು ಹಾಕುತ್ತಾರೆ: ‘ಕೆಲವರು ಮಾಡುವ ಕೆಲಸದಿಂದಾಗಿ ಅಧಿಕಾರಿಗಳು ಈಗಲೇ ಕೋಲಾರ ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿಮ್ಮ ದೂರು ತಿಳಿಸುವುದಕ್ಕೂ ಅಧಿಕಾರಿಗಳು ಇರುವುದಿಲ್ಲ’ ಎಂದು ಗುಡುಗಿದರು.

ಆಗ ಮಧ್ಯಪ್ರವೇಶಿಸಿದ ಸಂಸದ ಎಸ್.ಮುನಿಸ್ವಾಮಿ, ‘ಜಿಲ್ಲಾಧಿಕಾರಿಯವರು ಆವೇಷಕ್ಕೆ ಒಳಗಾಗಬಾರದು. ಅಧಿಕಾರಿಗಳಲ್ಲಿ ಕಳ್ಳ- ಸುಳ್ಳರನ್ನು ಒಂದೇ ರೀತಿ ಕಾಣುವುದು ಬೇಡ. ಮುಖಂಡರು ಪರಿಸ್ಥಿತಿ ಅರಿತು ಮಾತನಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ಅಕ್ರಮದ ಬಗ್ಗೆ ದಾಖಲೆಪತ್ರ ಇದ್ದರೆ ನೇರವಾಗಿ ದೂರು ನೀಡಿ. ಅದು ಬಿಟ್ಟು ವಿನಾಕಾರಣ ಆರೋಪ ಮಾಡಬೇಡಿ’ ಎಂದು ವಿವಾದಕ್ಕೆ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.