ಮಳೆ ಕೊರತೆಯಿಂದ ಒಣಗುತ್ತಿರುವ ನೆಲಗಡಲೆ (ಎಡಚಿತ್ರ) ಒಣಗುತ್ತಿರುವ ಜೋಳದ ಬೆಳೆ
ವೇಮಗಲ್: ರಾಜ್ಯದ ಹಲವೆಡೆ ಅಬ್ಬರಿಸುತ್ತಿರುವ ಮಳೆ ಜಿಲ್ಲೆಯ ವೇಮುಗಲ್ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಬಾರದ ಹಿನ್ನೆಲೆ ರಾಗಿ ಬಿತ್ತನೆಗೆ ಹಿನ್ನೆಡೆಯಾಗಿದೆ.
ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಬಿತ್ತನೆ ಸಮಯದಲ್ಲಿ ಮಳೆ ಬಂದಿಲ್ಲ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತ್ತಿದ್ದಾರೆ. ನಿತ್ಯ ಮೋಡ ಕವಿದ ವಾತಾವರಣ ಮಾತ್ರ ಇರುತ್ತದೆ. ದಟ್ಟ ಮೋಡ ಕವಿದಾಗ ಮಳೆ ಬರುವುದೋನೆ ಎಂದು ರೈತರು ನಿತ್ಯ ಕಾಯುವುದು ಸಾಮಾನ್ಯವಾಗಿ ಬಿಟ್ಟಿದೆ.
ಅಲ್ಲಲ್ಲಿ ಬಿತ್ತನೆ ಆಗಿರುವುದನ್ನು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಸಕಾಲಕ್ಕೆ ಮಳೆಯಾಗಿದ್ದರೆ ಆಗಸ್ಟ್‌ನಲ್ಲಿ ರಾಗಿ ಬಿತ್ತನೆ ಬಹುತೇಕ ಪೂರ್ಣಗೊಳ್ಳುತ್ತಿತ್ತು.
ಮುಂಗಾರು ಪೂರ್ವಮಳೆ ಆರಂಭದಲ್ಲಿ ಕೈಕೊಟ್ಟರೂ ಜೂನ್ ಮೊದಲಿನಲ್ಲಿ ಸಾಧಾರಣ ಮಳೆಯಾಯಿತು. ಇದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ. ಈಗ ಎರಡು ವಾರಗಳಿಂದ ಮಳೆ ಸುಳಿವೇ ಇಲ್ಲದೇ ಬಿತ್ತನೆ ಹೇಗೆಂಬ ಯೋಚನೆಯಲ್ಲಿದ್ದಾರೆ.
ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿಯನ್ನು ಜುಲೈ ಆಗಸ್ಟ್‌ನಲ್ಲಿ ಬಿತ್ತನೆ ಮಾಡುವುದು ವಾಡಿಕೆ. ಆಷಾಡ ಮಾಸದಲ್ಲಿ ಮಳೆ ಕೈಕೊಟ್ಟರೆ ಬಿತ್ತನೆ ಕಷ್ಟ ಎನ್ನುತ್ತಾರೆ ರೈತರು. ಹಿಂದಿನ ವರ್ಷ ಬರಗಾಲದಿಂದ ರಾಗಿ ಬಿತ್ತನೆ ಸಾಧ್ಯವಾಗಲಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಎದುರಾದರೆ ಹೇಗೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಜೂನ್ ಮೊದಲ ಎರಡು ವಾರಗಳಲ್ಲಿ ಮಳೆ ಪ್ರಾರಂಭವಾದ
ತಕ್ಷಣ ಕೆಲ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಆದರೆ ನಂತರ ಮಳೆ ಬೀಳದೆ ರಾಗಿ ಮೊಳಕೆ ಬಂದಿಲ್ಲ. ಈಗ ಮತ್ತೊಮ್ಮೆ ಮಳೆ ಬಂದರೆ ಅದೇ ಹೊಲದಲ್ಲಿ ಮತ್ತೆ ರಾಗಿ ಬಿತ್ತುವ ಯೋಚನೆಯಲ್ಲಿದ್ದಾರೆ.
ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ರೈತರು ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ಮನೆಗಳಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ನೆಲಗಡಲೆ, ಜೋಳ ಬೆಳೆಗಳಿಗೂ ತೇವಾಂಶ ಕೊರತೆಯಿಂದ ಒಣಗುತ್ತಿವೆ.
ಕಳೆದ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ರಾಗಿ ಬಿತ್ತನೆ ಇಲ್ಲದೆ ರೈತರು ಕಂಗಾಲಾಗಿದ್ದರು. ಈ ವರ್ಷವೂ ಅದೇ ಪರಿಸ್ಥಿತಿ ಬಂದರೆ ರಾಗಿಯ ಕೊರತೆ ಎದುರಾಗಿ, ರಾಗಿ ಬೆಲೆ ಏರಿಕೆಯಾಗಲಿದಿಯೇ ಎಂಬ ಆತಂಕ ಕಾಡುತ್ತಿದೆ.
ಭೂಮಿ ತೇವಾಂಶವಿಲ್ಲ
ಜೂನ್ ಮೊದಲ ವಾರದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿ ಭೂಮಿ ತೇವವಾಗಿದ್ದ ರಿಂದ ಹೊಲದಲ್ಲಿ ರಾಗಿ ಬಿತ್ತನೆ ಮಾಡಿದ್ದೆವು, ನಂತರ ಮಳೆ ಬರದೆ ಭೂಮಿಯ ತೇವವೆಲ್ಲ ಒಣಗಿ ಹೋಗಿ ರಾಗಿ ಮೊಳಕೆಗಳು ಒಣಗುತ್ತಿವೆ. ಈಗ ಮಳೆ ಬಂದರೆ ಬೆಳೆಗೆ ಜೀವ ಬಂದು ಬೆಳೆಯಲು ಅನುಕೂಲವಾಗುತ್ತದೆ.-ಕಾಂತರಾಜು, ರೈತರು, ರಾಜಕಲ್ಲಳ್ಳಿ ಗ್ರಾಮ
ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಗೆ ಅವಧಿ ಮುಗಿದಿದ್ದು, ರಾಗಿ ಬಿತ್ತನೆಗೆ ಆಗಸ್ಟ್ ಕೊನೆಯ ವಾರದವರೆಗೂ ಕಾಲಾವಕಾಶವಿದೆ. ಮುಂದೆ ಮಳೆ ಚುರುಕಾದರೆ ರೈತರು ರಾಗಿ ಬಿತ್ತನೆ ಮಾಡಬಹುದು.-ಶ್ರೀಧರ್, ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.