ADVERTISEMENT

ಕೋಲಾರ: ನರೇಗಾ ಹಣ ದುರ್ಬಳಕೆಯ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:49 IST
Last Updated 13 ಜುಲೈ 2020, 16:49 IST

ಕೋಲಾರ: ‘ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ನರೇಗಾ ಯೋಜನೆಯ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಜಿಲ್ಲಾ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯ ಎನ್.ನಾರಾಯಣಸ್ವಾಮಿ ಆರೋಪಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಧಿಕಾರಿಗಳು ಜನರ ತೆರಿಗೆ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ ನರೇಗಾ ಯೋಜನೆಯಲ್ಲಿ ಭಾರಿ ಮೊತ್ತದ ಹಣ ಲಪಟಾಯಿಸಿದ್ದಾರೆ’ ಎಂದು ದೂರಿದರು.

‘ನೆಲವೆಂಕಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ.ವಿ.ವಿಶ್ವನಾಥರೆಡ್ಡಿ ಅವರ ಅವಧಿಯಲ್ಲಿ ಅಕ್ರಮ ನಡೆದಿದೆ. ನರೇಗಾ ಯೋಜನೆಯಡಿ ಸರಬರಾಜು ಮಾಡಿರುವ ಸಾಮಗ್ರಿಗಳ ಬಿಲ್‌ನ ಮೊತ್ತಕ್ಕೂ ಮತ್ತು ಅಳತೆ ಪುಸ್ತಕದಲ್ಲಿ ದಾಖಲು ಮಾಡಿರುವ ಮೊತ್ತಕ್ಕೂ ತಾಳೆಯಿಲ್ಲ’ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

‘ಅಳತೆ ಪುಸ್ತಕದಲ್ಲಿ ದಾಖಲಿಸಿರುವ ಮೊತ್ತಕ್ಕೆ ಅಧ್ಯಕ್ಷರ ಸಹಿ ಮಾತ್ರ ಇದೆ. ಪಿಡಿಒ ಸಹಿ ಮಾಡಿಲ್ಲ. ಪಿಡಿಒ ಅವರ ಮಗ ಸಂದೀಪ್‌ ಖಾತೆಗೆ ₹ 38.87 ಲಕ್ಷ ಜಮಾ ಮಾಡಲಾಗಿದೆ. ಈ ಅಕ್ರಮದ ಸಂಬಂಧ ಜಿಲ್ಲಾ ಪಂಚಾಯಿತಿಯ ಒಂಬುಡ್ಸ್‌ಮನ್ ಅವರಿಗೆ ದೂರು ನೀಡಿದ್ದೇನೆ. ಆದರೆ, ಈವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ವಿವರಿಸಿದರು.

‘ಅಕ್ರಮದ ಸಂಬಂಧ ಮೂವರು ಐಎಎಸ್‌ ಅಧಿಕಾರಿಗಳು ಸೇರಿದಂತೆ 12 ಮಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಕೊಟ್ಟಿದ್ದು, ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಪ್ರಕರಣದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಸರ್ಕಾರದ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.