ADVERTISEMENT

ಎನ್‌ಎಸ್‌ಎಸ್‌: ಸಾಮಾಜಿಕ ಜವಾಬ್ದಾರಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 16:27 IST
Last Updated 13 ಫೆಬ್ರುವರಿ 2021, 16:27 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳ ಸಭೆಯಲ್ಲಿ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಭಿತ್ತಿಪತ್ರ ಮತ್ತು ಎನ್‌ಎಸ್‌ಎಸ್‌ ಕೈಪಿಡಿ ಬಿಡುಗಡೆ ಮಾಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳ ಸಭೆಯಲ್ಲಿ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಭಿತ್ತಿಪತ್ರ ಮತ್ತು ಎನ್‌ಎಸ್‌ಎಸ್‌ ಕೈಪಿಡಿ ಬಿಡುಗಡೆ ಮಾಡಿದರು.   

ಕೋಲಾರ: ‘ರಾಷ್ಟ್ರೀಯ ಸೇವಾ ಯೋಜನೆಗೆ (ಎನ್‌ಎಸ್‌ಎಸ್‌) ಹೆಚ್ಚು ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವ ಮೂಲಕ ಅವರಲ್ಲಿ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಸಲಹೆ ನೀಡಿದರು.

ಬೆಂಗಳೂರು ಉತ್ತರ ವಿ.ವಿ ಶನಿವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳ ಸಭೆ ಹಾಗೂ ಸ್ಕೂಲ್‌ಬೆಲ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಎನ್‌ಎಸ್‌ಎಸ್‌ನಿಂದ ಶ್ರಮದಾನದ ಮಹತ್ವ, ಸ್ವಚ್ಛ ಪರಿಸರ ನಿರ್ಮಾಣ, ಪರಿಸರ ಸಂರಕ್ಷಣೆಯ ಹೊಣೆ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣವು ಓದಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಬೇಕು. ಜತೆಗೆ ಸಾಮಾಜಿಕ ಬದ್ಧತೆ, ಹೃದಯವಂತಿಕೆ ಬೆಳೆಸುವ ಅಗತ್ಯವಿದೆ. ಎನ್‌ಎಸ್‌ಎಸ್‌ಗೆ ಸೇರುವುದರಿಂದ ಶಿಸ್ತು, ಸಮಯ ಬದ್ಧತೆ, ಸಂಯಮ ಬೆಳೆಯುತ್ತದೆ. ಕಾಲೇಜುಗಳಲ್ಲಿ ಎನ್‌ಎಸ್‌ಎಸ್‌ ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಎಸ್‌ಎಸ್‌ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದರಿಂದ ಸಮಾಜಕ್ಕೆ ಸೇವೆ ನೀಡಲು ಪ್ರೋತ್ಸಾಹಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ವಿ.ವಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಯೋಜನೆ ರೂಪಿಸಿ’ ಎಂದು ತಿಳಿಸಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಎನ್‌ಎಸ್‌ಎಸ್‌ ಸದಸ್ಯರು ಹಾಗೂ ವಿ.ವಿಯ ವಿವಿಧ ಕಾಲೇಜುಗಳ ಎನ್ಎಸ್‌ಎಸ್‌ ಘಟಕಗಳ ಸಾಮಾಜಿಕ ಕಾರ್ಯ ಮರೆಯುವಂತಿಲ್ಲ. ಮಾಸ್ಕ್‌ ವಿತರಣೆ, ಸಾಮಾಜಿಕ ಅಂತರದ ಅರಿವು ಮೂಡಿಸುವಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‌ಎಸ್‌ಎಸ್‌ ಅಧಿಕಾರಿಗಳಿಗೆ ಪ್ರಶಸ್ತಿಪತ್ರ ನೀಡಲಾಯಿತು. ಎನ್‌ಎಸ್‌ಎಸ್‌ ಕಾರ್ಯಕ್ರಮ ಯೋಜನಾಧಿಕಾರಿ ಪೂರ್ಣಿಮಾ, ಸ್ಕೂಲ್ ಬೆಲ್ ಕಾರ್ಯಕ್ರಮ ಅಧಿಕಾರಿ ಮಹೇಶ್ ಉಪನ್ಯಾಸ ನೀಡಿದರು. ಬೆಂಗಳೂರಿನ ಕೆ.ಆರ್‌.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.