
ಕೋಲಾರ: ಸಾಮಾನ್ಯವಾಗಿ ಈ ಋತುವಿನಲ್ಲಿ ಹಲಸಿನ ಹಣ್ಣು ತೀರಾ ಕಡಿಮೆ. ಆದರೆ, ಟಮಕದ ತೋಟಗಾರಿಕಾ ಮಹಾವಿದ್ಯಾಲಯದ ತೋಟದಲ್ಲಿ ಅಕಾಲಿಕವಾಗಿ (ಆಫ್ ಸೀಸನ್) ಬೆಳೆದ ಹಲಸಿನ ಹಣ್ಣುಗಳನ್ನು ಕಾಣಬಹುದು.
ನಗರದ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲೂ ಈ ಹಲಸಿನ ಹಣ್ಣುಗಳು ವೀಕ್ಷಕರ ಗಮನ ಸೆಳೆದವು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಈ ಹಲಸಿನ ಗಾತ್ರವನ್ನು ನೋಡಿ ಬೆರಗಾದರು. ಹಲಸಿನ ಕಸಿ ಗಿಡಗಳನ್ನು ರೈತರಿಗೆ ಒದಗಿಸಲು ವಿಜ್ಞಾನಿಗಳು ಶ್ರಮಿಸಿದರೆ ಇದರಿಂದ ರೈತರ ಆದಾಯ ಹೆಚ್ಚುವುದರ ಜೊತೆಗೆ ಬೇರೆ ಋತುಗಳಲ್ಲೂ ಹಣ್ಣನ್ನು ಜನ ಸವಿಯಬಹುದು ಎಂದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಈ ಹಲಸಿನ ಹಣ್ಣುಗಳನ್ನು ವೀಕ್ಷಿಸಿ, ‘ತೋಟಗಾರಿಕಾ ಮಹಾವಿದ್ಯಾಲಯ, ಟಮಕದಿಂದ ಹಲಸಿನ ಮೂರು ತಳಿಗಳು ಗುರುತಿಸಿರುವುದು ವಿಶೇಷವಾಗಿದೆ. ಹಲಸಿನ ತಳಿಗಳ ಅಭಿವೃದ್ಧಿಯತ್ತ ವಿಜ್ಞಾನಿಗಳು ಗಮನ ಹರಿಸಬೇಕು. ರೈತರಿಗೆ ತಾಂತ್ರಿಕ ಮಾಹಿತಿಯ ಅರಿವು ಮೂಡಿಸುವುದು ಪ್ರಮುಖವಾಗಿದೆ’ ಎಂದು ಹೇಳಿದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ರಾಘವೇಂದ್ರ ಕೆ.ಮೇಸ್ತ ಮಾತನಾಡಿ, ‘ತೋಟಗಾರಿಕಾ ಮಹಾವಿದ್ಯಾಲಯದ ಹಲಸಿನ ಕ್ಷೇತ್ರದಲ್ಲಿ 1,600 ಹಲಸಿನ ಮರಗಳಿವೆ. ತಾಜಾ ಸವಿಯುವ, ತರಕಾರಿ ವಿಧದ, ಅಂಟು ಕಡಿಮೆ ಇರುವ, ಅಕಾಲಿಕ ಇನ್ನಿತರ ಗುಣವಿರುವ ಹಲಸಿನ ಮರಗಳಿವೆ. ಮೂರು ಮುಖ್ಯ ವಿಧಗಳನ್ನು ಗುರುತಿಸಲಾಗಿದ್ದು, ಅವುಗಳ ಕಸಿ ಗಿಡಗಳು ಮಹಾವಿದ್ಯಾಲಯದಲ್ಲಿ ಮಾರಾಟಕ್ಕಿವೆ’ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಾನಂದ ಹೊಂಗಲ, ಟಮಕದ ಹಲಸಿನ ಕ್ಷೇತ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿಯನ್ನು ಮಳಿಗೆಗೆ ಭೇಟಿ ನೀಡಿದ ಗಣ್ಯರಿಗೆ ಹಾಗೂ ವೀಕ್ಷಕರಿಗೆ ತಿಳಿಸಿದರು. ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗರಾಜ ಕೆ.ಎಸ್ ಹಲಸಿನ ತಳಿಗಳ ವಿವರಣೆ ನೀಡಿದರು. ಕ್ಷೇತ್ರ ಸಹಾಯಕರಾದ ನಾಗೇಶ್, ಈರಪ್ಪ ಹಾಗೂ ನವೀನ್ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಜೊತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಸಾವಯವ ಕೃಷಿಕ ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.