ADVERTISEMENT

ಜಿಲ್ಲೆಯಲ್ಲಿ 11 ಮಂದಿಗೆ ಓಮೈಕ್ರಾನ್‌ ಸೋಂಕು

ಕ್ವಾರಂಟೈನ್‌ ಅವಧಿ ಪೂರ್ಣ: ತಡವಾಗಿ ಬಂದ ವರದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 15:07 IST
Last Updated 23 ಜನವರಿ 2022, 15:07 IST

ಕೋಲಾರ: ಜಿಲ್ಲೆಯಲ್ಲಿ 11 ಮಂದಿಗೆ ಓಮೈಕ್ರಾನ್‌ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಸೋಂಕಿತರೆಲ್ಲರೂ ಈಗಾಗಲೇ ತಮ್ಮ ಮನೆಯಲ್ಲೇ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದು, ಇವರೆಲ್ಲರ ಜಿನೋಮಿಕ್‌ ಸೀಕ್ವೆನ್ಸ್‌ ವರದಿ ತಡವಾಗಿ ಜಿಲ್ಲಾಡಳಿತದ ಕೈ ಸೇರಿದೆ.

ಬಂಗಾರಪೇಟೆ ತಾಲ್ಲೂಕಿನ 4 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ ಒಬ್ಬರಿಗೆ, ಕೋಲಾರ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ತಲಾ ಇಬ್ಬರಿಗೆ ಓಮೈಕ್ರಾನ್‌ ಸೋಂಕು ಇರುವುದು ಖಚಿತವಾಗಿದೆ. ಈ ಸೋಂಕಿತರ ಪೈಕಿ 5 ಮಂದಿ ಪುರುಷರು ಮತ್ತು 6 ಮಂದಿ ಮಹಿಳೆಯರು ಸೇರಿದ್ದಾರೆ. ಇವರಲ್ಲಿ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳಿದ್ದಾರೆ.

ಈ 11 ಮಂದಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೋವಿಡ್‌ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಇವರೆಲ್ಲರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬೆಂಗಳೂರಿನ ಪ್ರಯೋಗಾಲಯದಲ್ಲಿ ಹೆಚ್ಚಿನ ಒತ್ತಡ ಇರುವ ಕಾರಣ ಓಮೈಕ್ರಾನ್‌ ವರದಿ ಬರುವುದು ತಡವಾಯಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಓಮೈಕ್ರಾನ್‌ ಸೋಂಕಿತರೆಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ದೇಹಸ್ಥಿತಿ ಸ್ಥಿರವಾಗಿದೆ. ಯಾರೊಬ್ಬರೂ ವೆಂಟಿಲೇಟರ್‌ ಸಂಪರ್ಕದ ಹಂತ ತಲುಪಿಲ್ಲ. ಇವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಸದ್ಯದಲ್ಲೇ ವರದಿ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓಮೈಕ್ರಾನ್‌ ಸೋಂಕಿತರ ಮನೆಗಳಿಗೆ ವೈದ್ಯರ ತಂಡ ಪ್ರತಿನಿತ್ಯ ಭೇಟಿ ಕೊಟ್ಟು ಆರೋಗ್ಯ ತಪಾಸಣೆ ಮಾಡುತ್ತಿದೆ. ಕೋವಿಡ್‌ನಂತೆಯೇ ಸೋಂಕಿತರ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.