ಬಂಗಾರಪೇಟೆ: ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕೆಜಿಎಫ್‌ನಲ್ಲಿರುವ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
2024 ಅಕ್ಟೋಬರ್ 29ರಂದು ಬಂಗಾರಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಫರಿದಾ ಬಾನು ಅವರು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಕಂಡು ವಿಚಾರಿಸಲು ಮುಂದಾದಾಗ, ಆತ ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾಗಿದ್ದನು. ತೀವ್ರ ಗಾಯಗೊಂಡಿದ್ದ ಫರಿದಾ ಬಾನು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಘಟನೆ ನಡೆದ ಬೆನ್ನಲ್ಲೇ ಅಂದಿನ ಬಂಗಾರಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ನಂಜಪ್ಪ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ, ಬಂದ ಇನ್‌ಸ್ಪೆಕ್ಟರ್ ದಯಾನಂದ್.ಆರ್ ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆದ ನಂತರ, ಆರೋಪಿಯು ಎಸಗಿದ ಕೃತ್ಯ ಸಾಬೀತಾಗಿದೆ. ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನದ ಗಂಭೀರತೆ ಪರಿಗಣಿಸಿ ನ್ಯಾಯಾಲಯವು ಜ.22 ರಂದು ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.