ADVERTISEMENT

ವಾಕ್–ಶ್ರವಣ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:24 IST
Last Updated 13 ಆಗಸ್ಟ್ 2019, 12:24 IST

ಕೋಲಾರ: ‘ಸಂಸ್ಥೆಯ ತುರ್ತು ವೈದ್ಯಕೀಯ ಸೇವೆ, ವಾಕ್ ಶ್ರವಣ ಹಾಗೂ ಅಡ್ವಾನ್ಸ್ ರೀಸರ್ಚ್ ಅಂಡ್ ಎಕ್ಸೆಲೆನ್ಸ್ ವಿಭಾಗಗಳ ಕಟ್ಟಡದ ಉದ್ಘಾಟನಾ ಸಮಾರಂಭ ಆ.15ರಂದು ನಡೆಯಲಿದೆ’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಪತಿ ಡಾ.ಎಸ್.ಕುಮಾರ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾನತಾಡಿ, ‘ಸಂಸ್ಥೆ ಅಧ್ಯಕ್ಷ ಆರ್.ಎಲ್.ಜಾಲಪ್ಪ ಅವರ ಆಶಯದಂತೆ ಜಿಲ್ಲೆಯ ಜನರ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ವಿಭಾಗ ಆರಂಭಿಸಲಾಗುತ್ತಿದೆ’ ಎಂದರು.

‘ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ನಿಮ್ಹಾನ್ಸ್‌ನ ವಿಶ್ರಾಂತ ಉಪ ಕುಲಪತಿ ಡಾ.ಪಿ.ಸತೀಶ್‌ಚಂದ್ರ ಸಮಾರಂಭ ಉದ್ಘಾಟಿಸುತ್ತಾರೆ. ಅಪೋಲೋ ಆಸ್ಪತ್ರೆ ತುರ್ತು ವೈದ್ಯ ವಿಭಾಗದ ಮುಖ್ಯಸ್ಥೆ ಡಾ.ಅರುಣಾ ನೂತನ ಕಟ್ಟಡಗಳನ್ನು ಉದ್ಘಾಟಿಸುತ್ತಾರೆ. ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ನಿರ್ದೇಶಕ ಜೆ.ರಾಜೇಂದ್ರ ಅತಿಥಿಗಳಾಗಿ ಭಾಗವಹಿಸುತ್ತಾರೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಅಗತ್ಯ ಸೌಕರ್ಯ ಕಲ್ಪಿಸಲು ಟ್ರಸ್ಟ್ ಸಿದ್ಧವಿದೆ. ದೇಶದಲ್ಲಿ ಪ್ರತಿನಿತ್ಯ ಸಾಕಷ್ಟು ಅಪಘಾತ ಸಂಭವಿಸುತ್ತಿದ್ದು, ಈ ಪೈಕಿ 6 ಲಕ್ಷ ಮಂದಿ ತೀವ್ರವಾಗಿ ಗಾಯಗೊಂಡು ಅಂಗಾಂಗ ಕಳೆದುಕೊಳ್ಳುತ್ತಿದ್ದಾರೆ. ತುರ್ತು ಚಿಕಿತ್ಸೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ವಿವರಿಸಿದರು.

₹ 1 ಕೋಟಿ ನೆರವು: ‘ಸಂಸ್ಥೆಯು ಆರೋಗ್ಯ, ಶಿಕ್ಷಣ ಸೇವೆ ಜತೆಗೆ ನೆರೆ ಸಂತ್ರಸ್ತರಿಗೆ ನೆರವು ನೀಡಿದೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮ ನಡೆಸುತ್ತಿದೆ. ಈ ಹಿಂದೆ ಕೇರಳ ಹಾಗೂ ಕೊಡಗು ನೆರೆ ಸಂತ್ರಸ್ತರಿಗೆ ಸಂಸ್ಥೆಯಿಂದ ₹ 1 ಕೋಟಿ ನೆರವು ನೀಡಲಾಗಿತ್ತು’ ಎಂದು ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಮಾಹಿತಿ ನೀಡಿದರು.

‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಒಂದು ದಿನದ ವೇತನದ ಮೊತ್ತ ₹ 10 ಲಕ್ಷ ನೀಡಲಾಗುತ್ತದೆ. ಅಲ್ಲದೇ, ಸಂಸ್ಥೆಯಿಂದ ₹ 1 ಕೋಟಿ ನೆರವನ್ನು ಜಿಲ್ಲಾಧಿಕಾರಿ ಮೂಲಕ ತಲುಪಿಸಲಾಗುವುದು. ಜತೆಗೆ ವೈದ್ಯರ ತಂಡ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸುತ್ತೇವೆ’ ಎಂದು ತಿಳಿಸಿದರು.

ಸಂಸ್ಥೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ, ಡೀನ್ ಡಾ.ಶ್ರೀರಾಮುಲು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸಿ. ಮುನಿನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.