ADVERTISEMENT

ಕಾರ್ಮಿಕ ವಿರೋಧಿ ಮಸೂದೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:05 IST
Last Updated 27 ನವೆಂಬರ್ 2020, 6:05 IST
ಬಂಗಾರಪೇಟೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸದಸ್ಯರು ಕಾರ್ಮಿಕ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ದಯಾನಂದ ಅವರಿಗೆ ಮನವಿ ಸಲ್ಲಿಸಿದರು
ಬಂಗಾರಪೇಟೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸದಸ್ಯರು ಕಾರ್ಮಿಕ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ದಯಾನಂದ ಅವರಿಗೆ ಮನವಿ ಸಲ್ಲಿಸಿದರು   

ಬಂಗಾರಪೇಟೆ: ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ತಾಲ್ಲೂಕು ಸಮಿತಿ ಸದಸ್ಯರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಕಾನೂನು ಜಾರಿಗೊಳಿಸುವ ಮೊದಲು ಸಂಬಂಧಿಸಿದವರ ಜತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಈಚೆಗೆ 44 ಕಾರ್ಮಿಕ ಕಾನೂನುಗಳನ್ನು ಸಮೀಕರಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿದೆ. ಇದಕ್ಕೆ ಸಂಬಂಧಿಸಿದ ಕಾರ್ಮಿಕ ಸಂಘಟನೆಗಳ ಜೊತೆ ಯಾವುದೇ ಚರ್ಚೆ, ಸಮಾಲೋಚನೆ ಮಾಡದಿರುವುದು ಖಂಡನೀಯ ಎಂದು ಸಿಐಟಿಯು ಜಿಲ್ಲಾ ಮುಖಂಡ ಪಿ. ಶ್ರೀನಿವಾಸ್ ದೂರಿದರು.

ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಬಿಸಿಯೂಟ ಕಾರ್ಮಿಕರು, ಬೀಡಿ ಕಾರ್ಮಿಕರು, ನಿರ್ಮಾಣ ಮತ್ತು ದಿನಗೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಬಹುತೇಕ ಕಾರ್ಮಿಕರನ್ನು ಕಾನೂನು ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂದು ದೂರಿದರು.

ADVERTISEMENT

2020ರ ವಿದ್ಯುತ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, 12 ರಾಜ್ಯದ ಮುಖ್ಯಮಂತ್ರಿಗಳ ವಿರೋಧದ ನಡುವೆಯೂ ವಿದ್ಯುತ್ ವಿತರಣಾಲಯವನ್ನು ಖಾಸಗೀಕರಣಗೊಳಿಸಿ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ರಾಮೇಗೌಡ ಮಾತನಾಡಿ, ರೈತರು ಮತ್ತು ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಯ್ದೆ ತಿದ್ದುಪಡಿ ಮಾಡಿ ಕೋಟ್ಯಂತರ ಹಣವನ್ನು ಲೂಟಿ ಮಾಡುತ್ತಿವೆ ಎಂದರು.

ತಹಶೀಲ್ದಾರ್ ದಯಾನಂದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಐಸಿಟಿಯು ಪ್ರಭಾಕರನ್, ಸಿಐಟಿಯು ತಾಲ್ಲೂಕು ಸಂಚಾಲಕ ಕೇಶವರಾವ್, ಅನ್ನದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ರಾಮಕೃಷ್ಣ, ಹನುಮಂತರಾಯ, ಎಂ.ವಿ. ಗೀತಾ, ವಿಜಯಕುಮಾರ್, ಸಿ. ರಾಮಮೂರ್ತಿ, ಪೆರುಮಾಳಪ್ಪ, ವಿ. ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.