ADVERTISEMENT

ಅವರ ಹೃದಯಗಳು ಇನ್ನೂ ಮಿಡಿಯುತ್ತಿವೆ!

ಅಂಗಾಂಗ ದಾನ ಮಾಡಿ ಹತ್ತಾರು ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದವರು...

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 17:54 IST
Last Updated 12 ಆಗಸ್ಟ್ 2025, 17:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲಾರ: ಆ ಜೀವಗಳನ್ನು ಬದುಕಿಸಲು ಕುಟುಂಬದವರು ಹೋರಾಟ ನಡೆಸಿದರು. ಆ ಶತಪ್ರಯತ್ನ ಸಾಕಾಗಲಿಲ್ಲ. ಉಸಿರು ಚೆಲ್ಲಿದರೂ ಅವರ ಹೃದಯಗಳು ಇನ್ನೂ ಮಿಡಿಯುತ್ತಿವೆ, ಮತ್ತೊಬ್ಬರ ದೇಹ ಸೇರಿ ಜೀವ ತುಂಬಿವೆ.

ಅಪಘಾತ ಹಾಗೂ ಇನ್ನಿತರ ಕಾರಣದಿಂದ ಮೆದುಳು ನಿಷ್ಕ್ರಿಯಗೊಂಡವರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಗಳ ಮನಮಿಡಿಯುವ ಕಥೆಗಳಿವು. ದಾನಿಗಳು ಮತ್ತೊಬ್ಬರಿಗೆ ಜೀವ ತುಂಬಿ ಉಸಿರು ಚೆಲ್ಲಿದರೆ, ದಾನ ಮಾಡಲು ಒಪ್ಪಿದ ಕುಟುಂಬಸ್ಥರು ಸೇತುವೆಯಾಗಿ ಮಾನವೀಯತೆ ತೋರಿದ್ದಾರೆ. ಅಂಗಾಂಗ ಕಸಿ ಅವಶ್ಯವಿರುವ ರೋಗಿಗಳ ಪ್ರಾಣ ಉಳಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಆರು ಮಂದಿ ಅಂಗಾಂಗ ದಾನ ಮಾಡಿ ಹತ್ತಾರು ಮಂದಿಯ ಜೀವ ಉಳಿಸಿದ್ದಾರೆ. ಹೃದಯ, ಯಕೃತ್‌, ಕಾರ್ನಿಯಾಗಳು, ಕಿಡ್ನಿಗಳು, ವಾಲ್ವ್‌ಗಳು ಹಾಗೂ ಮೇದೋಜೀರ ಗ್ರಂಥಿಯನ್ನು ದಾನವಾಗಿ ನೀಡಿದ್ದಾರೆ.

ADVERTISEMENT

ಬಂಗಾರಪೇಟೆ ತಾಲ್ಲೂಕಿನ ಕೆ.ಸಾಗರ್ (30) ತಮ್ಮೇನಹಳ್ಳಿನಲ್ಲಿ ಬೈಕ್‌ ಅಪಘಾತದಲ್ಲಿ ಜೂನ್‌ನಲ್ಲಿ ಮೃತಪಟ್ಟಿದ್ದರು. ಅವರಿಗೆ ಪತ್ನಿ ಹಾಗೂ ಐದು ವರ್ಷ ಮಗುವಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಸಾಗರ್ ಅವರ ಯಕೃತ್‌, ಕಿಡ್ನಿಗಳು, ಕಾರ್ನಿಯಾಗಳು, ಹೃದಯ ಹಾಗೂ ವಾಲ್ವ್‌ಗಳನ್ನು ಕುಟುಂಬಸ್ಥರು ದಾನವಾಗಿ ನೀಡಲು ಒಪ್ಪಿದ್ದರು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅವರ ಕುಟುಂಬದ ಒಪ್ಪಿಗೆ ಮೇರೆಗೆ ವೈದ್ಯರು ಅಂಗಾಂಗ ಕಸಿ ಮಾಡಿದ್ದಾರೆ.

ಮಾಲೂರಿನ ಮುರಳಿ ಕೆ. (33) ಎಂಬುವರು ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಬಾಣಂತಿ ಪತ್ನಿ ಹಾಗೂ ಮಗುವನ್ನು ನೋಡಿಕೊಂಡು ಬಂಗಾರಪೇಟೆಯಿಂದ ಮಾಲೂರಿಗೆ ಹೋಗುವಾಗ ಈ ಅವಘಡ ಸಂಭವಿಸಿತ್ತು. ತಲೆಗೆ ಏಟು ಬಿದ್ದು ಮೂರು ದಿನ ಕೋಮಾದಲ್ಲಿದ್ದರು. ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಕುಟುಂಬದವರು ಅಂಗಾಂಗ ದಾನ ಮಾಡಲು ಒಪ್ಪಿದ್ದರು. ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಯಲ್ಲಿ ಮುರಳಿ ಅವರ ಯಕೃತ್‌, ಕಿಡ್ನಿಗಳು, ಹೃದಯ ಹಾಗೂ ವಾಲ್ವ್‌ಗಳನ್ನು ದಾನವಾಗಿ ನೀಡಲಾಗಿದೆ. ಅವರಿಗೆ ಪತ್ನಿ ಹಾಗೂ ಮಗುವಿದೆ. ಪತಿಯ ಅಂಗಾಂಗ ದಾನದಿಂದ ನಾಲ್ಕಾರು ಮಂದಿ ಬದುಕುತ್ತಿದ್ದಾರೆ ಎಂಬುದಷ್ಟೇ ನಮಗೆ ಸಮಾಧಾನ ಎಂದು ಭಾವುಕರಾಗಿದ್ದು ಪತ್ನಿ.

ಕೋಲಾರದ ಕಾರಹಳ್ಳಿಯ ಎನ್‌.ವಿಮಲಾ (59) ಎಂಬುವರ ಕಿಡ್ನಿಗಳು, ಯೃಕತ್‌, ಮಾಲೂರಿನ ಚೇತನ್‌ ಜೆ. (37) ಎಂಬುವರ ಯಕೃತ್‌, ಕಿಡ್ನಿಗಳು, ಹೃದಯ, ವಾಲ್ವ್‌ಗಳು, ಕೋಲಾರದ ರಾಜಕಲ್ಲಹಳ್ಳಿಯ ಪ್ರವೀಣ್‌ ಕುಮಾರ್‌ (32) ಎಂಬುವರ ಹೃದಯ, ಯಕೃತ್‌, ಕಾರ್ನಿಯಾಗಳು ಹಾಗೂ ಮೇದೋಜೀರ ಗ್ರಂಥಿ ಹಾಗೂ ಕೋಲಾರ ನಗರದ ಎನ್‌.ಎನ್‌.ವಿಜಯಲಕ್ಷ್ಮಿ (58) ಎಂಬುವರ ಯಕೃತ್‌ ಹಾಗೂ ಕಾರ್ನಿಯಾಗಳನ್ನು ದಾನವಾಗಿ ನೀಡಿದ್ದಾರೆ.

ಈ ಆರೂ ಮಂದಿಯ ಅಂಗಾಂಗಳು ಹಲವಾರು ರೋಗಿಗಳನ್ನು ಬದುಕಿಸಿವೆ. ಮೃತರ ಕುಟುಂಬಸ್ಥರ ಈ ನಿರ್ಧಾರ ಇತರರಿಗೆ ಮಾದರಿಯಾಗಿದೆ. ಇವರ ಕ್ರಮವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಬಂಗಾರಪೇಟೆ ಬಳಿ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ವೈದ್ಯಾಧಿಕಾರಿ ಡಾ.ಸಂಧ್ಯಾ (25) ಅವರ ಅಂಗಾಂಗಗಳನ್ನು ಕುಟುಂದವರು ದಾನ ಮಾಡಲು ಒಪ್ಪಿದ್ದರು. ಅವರು ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿದ್ದರು.

ರಾಜ್ಯದಲ್ಲಿ ಅಂಗಾಂಗಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಈ ವರ್ಷ ಈವರೆಗೆ ಸುಮಾರು 121 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗಕ್ಕೆ ಕಾಯುತ್ತಿದ್ದು, ಮೂತ್ರಪಿಂಡಕ್ಕೆ ಹೆಚ್ಚಿನ ಬೇಡಿಕೆಯಿದೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯು ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ.

ಕಳೆದ ವಾರವಷ್ಟೇ ಅಂಗಾಂಗ ದಾನ ದಿನಾಚರಣೆ ನಡೆದಿತ್ತು. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. 2025ರ ಜುಲೈ 30ರ ವೇಳೆಗೆ ರಾಜ್ಯದಲ್ಲಿ 43,221 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ 

ನನ್ನ ತಮ್ಮ ಜೀವಂತವಾಗಿದ್ದರೆ ಎಷ್ಟಾದರೂ ಖರ್ಚು ಮಾಡಿ ಉಳಿಸಿಕೊಳ್ಳುತ್ತಿದ್ದೆವು. ಆತ ಬದುಕಿಲ್ಲ ನೋವು ಇದ್ದೇ ಇದೆ. ಆತನ ಅಂಗಾಂಗ ದಾನದಿಂದ ನಾಲ್ಕಾರು ಜನ ಬದುಕಿದ್ದಾರೆ ಎಂಬ ಸಮಾಧಾನ

ಸಂಜಯ್‌ ಸಾಗರ್‌ ಸಹೋದರ

ನನಗೆ ಒಬ್ಬನೇ ಮಗ. ಆತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಪುತ್ರನನ್ನು ಮರೆಯಲು ಆಗುತ್ತಿಲ್ಲ. ಆತನ ಅಂಗಾಂಗ ದಾನ ಮಾಡಿದ್ದು ಭೂಮಿಯಲ್ಲಿ ಯಾರದ್ದೋ ರೂಪದಲ್ಲಿ ಬದುಕಿದ್ದಾನೆ ಕೆ.ವಿ.ಪೆರಮಾಳಪ್ಪ ಪ್ರವೀಣ್‌ ಕುಮಾರ್‌ ತಂದೆ

ಸ್ವಾತಂತ್ರ್ಯೋತ್ಸವ ದಿನ ಸನ್ಮಾನ

ಕೋಲಾರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನದಂದು ಅಂಗಾಂಗ ದಾನಿಗಳ ಕುಟುಂಬಸ್ಥರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆಯು ಇಂಥ ಆರು ಮಂದಿ ದಾನಿಗಳ ಪಟ್ಟಿ ಮಾಡಿದೆ. ಅವರ ಕುಟುಂಬಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸನ್ಮಾನಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.