ADVERTISEMENT

ಆಮ್ಲಜನಕ ತಯಾರಿಕಾ ಘಟಕ ಸಿದ್ಧ

ಬೆಮಲ್‌ನಿಂದ ವಿನ್ಯಾಸ: ಕೊಪ್ಪಳಕ್ಕೆ ಮೊದಲ ಯೂನಿಟ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 3:05 IST
Last Updated 4 ಜೂನ್ 2021, 3:05 IST
ಬೆಮಲ್‌ನಿಂದ ಹೊಸದಾಗಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ
ಬೆಮಲ್‌ನಿಂದ ಹೊಸದಾಗಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ   

ಕೆಜಿಎಫ್‌: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ಕಾರ್ಖಾನೆಯಲ್ಲಿ ನಿಮಿಷಕ್ಕೆ 960 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಘಟಕವನ್ನು ವಿನ್ಯಾಸಗೊಳಿಸಲಾಗಿದೆ.

ರಕ್ಷಣಾ ಖಾತೆಯ ಬಯೋ ಎಂಜಿನಿಯರಿಂಗ್‌ ಮತ್ತು ಎಲೆಕ್ಟ್ರೋ ಮೆಡಿಕಲ್‌ ಲಾಬೋರೇಟರಿ ಜೊತೆ ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಪ್ರಥಮ ಘಟಕವನ್ನು ಇಲ್ಲಿನ ಘಟಕದಲ್ಲಿ ತಯಾರಿಸಲಾಗಿದೆ. ಮೊದಲ ಯಂತ್ರವನ್ನು ಕೊಪ್ಪಳದ ವೈದ್ಯಕೀಯ ಕಾಲೇಜಿಗೆ ನೀಡಲು ಆಡಳಿತ ವರ್ಗ ತೀರ್ಮಾನಿಸಿದೆ.

ಕೋವಿಡ್‌ ಎರಡನೇ ಅಲೆ ಹೆಚ್ಚಾದಾಗ ಆಮ್ಲಜನಕ ಘಟಕದ ಬೇಡಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪಿಎಂ ಕೇರ್ ಫಂಡ್‌ನಿಂದ ಆಮ್ಲಜನಕ ಘಟಕ ತಯಾರು ಮಾಡುವ ಕಾರ್ಯದಲ್ಲಿ ಬೆಮಲ್‌ ತಂತ್ರಜ್ಞರು ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಈಗಾಗಲೇ 100ಕ್ಕೂ ಘಟಕಕ್ಕೆ ಬೇಡಿಕೆ ಬಂದಿದೆ ಎಂದು ಬೆಮಲ್‌ ಮೂಲಗಳು ತಿಳಿಸಿವೆ.

ADVERTISEMENT

ಕೋವಿಡ್‌ ನಿಗ್ರಹಕ್ಕೆ ಬೆಮಲ್‌ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಮಲ್‌ನ 3,174 ಸಿಬ್ಬಂದಿ ಮತ್ತು ಕುಟುಂಬಕ್ಕೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೇ, ಉತ್ತಮ ಆಸ್ಪತ್ರೆ ಸೌಲಭ್ಯಗಳನ್ನು ನೀಡಿದೆ. ಬೆಮಲ್‌ ಮೆಡಿಕಲ್ ಸೆಂಟರ್‌ನಲ್ಲಿ ಪ್ರತಿನಿತ್ಯ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.

45 ವರ್ಷ ದಾಟಿದವರಿಗೆ ಶೇ. 55ರಷ್ಟು ಕಾರ್ಮಿಕರಿಗೆ ಲಸಿಕೆ ಹಾಕಲಾಗಿದೆ. 18 ವರ್ಷದೊಳಗಿನವರಿಗೆ ಕೂಡ ಲಸಿಕೆ ಕಾರ್ಯ ನಡೆದಿದೆ. ಇದರ ಜೊತೆಗೆ ಮಾಸ್ಕ್‌ ವಿತರಣೆ, ಆಹಾರ, ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಬೆಮಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಮಲ್ ಎಕ್ಸಿಕ್ಯೂಟಿವ್ ನಿರ್ದೇಶಕ ಈಶ್ವರ ಭಟ್‌ ಮತ್ತು ಶಂಕರ್‌, ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.