ಕೆಜಿಎಫ್: ಬಂಗಾರಪೇಟೆಯಲ್ಲಿ ಪ್ಯಾಲೆಸ್ಟೀನ್ ಬಾವುಟ ಹಾರಿಸಿ ಅಶಾಂತಿ ಉಂಟು ಮಾಡಿರುವವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರಿಗೆ ಮನವಿ ಸಲ್ಲಿಸಿದರು.
ಈದ್ ವಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್ ಬಾವುಟ ಹಾರಿಸಿ, ದೇಶ ವಿರೋಧಿ ಘೋಷಣೆ ಕೂಗಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲಾಗಿದೆ. ಇದಕ್ಕೆ ಕಾರಣರಾದ ಕಿಡಿಗೇಡಿಗಳನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಜಿಲ್ಲಾ ಸಂಯೋಜಕ ಕೆ.ಎಸ್.ಚಂದ್ರಕುಮಾರ್ ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷದ್ ಮುಖಂಡ ಶ್ರೀಧರರಾವ್ ಶಿಂಧೆ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಶಾಂತಿ ಭಂಗ ಉಂಟು ಮಾಡುವ ಕೆಲಸ ನಡೆಯುತ್ತಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಬಾರದು. ದುಷ್ಕೃತ್ಯ ನಡೆಸಿರುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಎಸ್ಪಿ ಶಿವಾಂಶು ರಜಪೂತ್, ಘಟನೆ ಬಗ್ಗೆ ಈಗಾಗಲೇ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಮುಖಂಡರಾದ ಬಿ.ವಿ.ಮಹೇಶ್, ಕಿಶೋರ್ ರಾಮಮೂರ್ತಿ, ರಾಜಣ್ಣ, ಹೇಮಂತ್, ಸುಬ್ಬು, ಸೊಣ್ಣೇಗೌಡ , ಗೌತಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.