ADVERTISEMENT

ಕೆಜಿಎಫ್‌: ಸೌಕರ್ಯ ವಂಚಿತ ಪಾಸ್‌ಪೋರ್ಟ್‌ ಸೇವಾ ಕೇಂದ್ರ

2019ರಿಂದ ಇಲ್ಲಿಯವರೆಗೆ ಪ್ರತ್ಯೇಕ ಕಚೇರಿ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:49 IST
Last Updated 1 ಡಿಸೆಂಬರ್ 2025, 7:49 IST
ಕೆಜಿಎಫ್‌ ರಾಬರ್ಟಸನ್‌ಪೇಟೆ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮುಂದೆ ಪಾಸ್‌ಪೋರ್ಟ್‌ ದಾಖಲೆ ಸಲ್ಲಿಸಲು ಕಚೇರಿ ಹೊರಗೆ ಅರ್ಜಿದಾರರು ಕಾಯುತ್ತಿರುವುದು
ಕೆಜಿಎಫ್‌ ರಾಬರ್ಟಸನ್‌ಪೇಟೆ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮುಂದೆ ಪಾಸ್‌ಪೋರ್ಟ್‌ ದಾಖಲೆ ಸಲ್ಲಿಸಲು ಕಚೇರಿ ಹೊರಗೆ ಅರ್ಜಿದಾರರು ಕಾಯುತ್ತಿರುವುದು   

ಕೆಜಿಎಫ್‌: ಮಹಾ ನಗರ ಹೊರತುಪಡಿಸಿ ವಿವಿಧೆಡೆ ಸಾರ್ವಜನಿಕರಿಗೆ ಪಾಸ್‌ಪೋರ್ಟ್‌ ಸುಲಭವಾಗಿ ಸಿಗುವಂತೆ ಕೇಂದ್ರ ಸರ್ಕಾರ 2012ರಲ್ಲಿ ರೂಪಿಸಿದ ಯೋಜನೆಯಂತೆ ನಗರದ ರಾಬರ್ಟಸನ್‌ಪೇಟೆ ಅಂಚೆ ಕಚೇರಿಯಲ್ಲಿ ಪ್ರಾರಂಭವಾದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಕೇಂದ್ರ ಸರ್ಕಾರದ ಯೋಜನೆಯಂತೆ ರಾಜ್ಯದ ಕೊಪ್ಪಳ, ಅಂಕೋಲ ಮತ್ತು ಕೆಜಿಎಫ್‌ ರಾಬರ್ಟಸನ್‌ಪೇಟೆಯ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಸ್ಥಾಪಿಸಲಾಯಿತು. 2019 ಜನವರಿ 25 ರಂದು ನಗರದಲ್ಲಿ ಪ್ರಾರಂಭವಾದ ಸೇವಾ ಕೇಂದ್ರವನ್ನು ಅಂದಿನ ಸಂಸದ ಕೆ.ಎಚ್‌.ಮುನಿಯಪ್ಪ ಉದ್ಘಾಟಿಸಿದ್ದರು. ರಾಬರ್ಟಸನ್‌ ಪೇಟೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯ ಒಂದು ಭಾಗದಲ್ಲಿ ತಾತ್ಕಾಲಿಕವಾಗಿ ಪಾಸ್‌ ಪೋರ್ಟ್‌ ಕಚೇರಿಯನ್ನು ತೆರೆಯಲಾಯಿತು. ಆದರೆ, ಅಂದಿನಿಂದ ಇಂದಿನವರೆವಿಗೂ ಅದೇ ಕಚೇರಿಯಲ್ಲಿದೆ.  ಎಲ್ಲಾ ಸೌಲಭ್ಯಗಳಿಂದ ಕೂಡಿದ ಕಚೇರಿಗೆ ಸ್ಥಳಾಂತರವೂ ಆಗಿಲ್ಲ.

ಬೆಂಗಳೂರಿನ ಎರಡು ಪಾಸ್‌ಪೋರ್ಟ್‌ ಕಚೇರಿಗಳಲ್ಲಿ ಸ್ಲಾಟ್‌ ಸಿಗುವುದೇ ಕಷ್ಟ. ಬೆಳಗ್ಗೆ ಹೋದರೆ ಸಂಜೆವರೆವಿಗೂ ಕಚೇರಿಯಲ್ಲಿ ಸಮಯ ಕಳೆಯಬೇಕು. ಅದರ ಬದಲು ಬೆಂಗಳೂರಿಗೆ ಸಮೀಪವಿರುವ ಕೆಜಿಎಫ್‌ನಲ್ಲಿ ಸುಲಭವಾಗಿ ಸ್ಲಾಟ್‌ ಸಿಗುತ್ತದೆ. ಎಲ್ಲಾ ದಾಖಲೆಗಳು ಪಕ್ಕಾ ಇದ್ದರೆ, ಶೀಘ್ರದಲ್ಲೇ ಕಚೇರಿ ಕೆಲಸ ಮುಗಿಸಬಹುದು ಎಂಬ ದೃಷ್ಟಿಯಿಂದ ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನ ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಪ್ರತಿದಿನ ಎರಡು ಕಂಪ್ಯೂಟರ್‌ಗಳಲ್ಲಿ 70 ರಿಂದ 80 ಅರ್ಜಿ ದಾಖಲಿಸಿಕೊಳ್ಳುವ ಸೌಲಭ್ಯ ಹೊಂದಲಾಗಿದೆ.

ADVERTISEMENT

ಕಚೇರಿಗೆ ಬರುವವರಿಗೆ ಟೋಕನ್‌ ನೀಡಲಾಗುತ್ತದೆ. ಆದರೆ, ದಾಖಲೆಗಳು ಸಂಪೂರ್ಣವಾಗಿ ಇಲ್ಲದೆ ಇದ್ದಲ್ಲಿ ಅದನ್ನು ಹೊಂದಿಸಿಕೊಂಡು ಬರುವವರಿಗೆ ಟೋಕನ್‌ ಸಂಖ್ಯೆ ಹೆಚ್ಚಾಗಿರುತ್ತದೆ. ಉದಾಹರಣೆಗೆ ಅನುಬಂಧ ಡಿ ಅರ್ಜಿಯಲ್ಲಿ ಮದುವೆಯಾಗಿರುವವರಿಗೆ ಗಂಡ – ಹೆಂಡತಿ ದಾಖಲೆ ನಮೂದಿಸಬೇಕಾಗುತ್ತದೆ. ದಾಖಲೆಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರದ್ದೂ ಸಹಿ ಬೇಕಾಗುತ್ತದೆ. ಇಲ್ಲವಾದಲ್ಲಿ ಸಹಿ ಪಡೆದುಕೊಂಡು ಬರುವವರೆವಿಗೂ ಅವರನ್ನು ಪರಿಗಣಿಸುವುದಿಲ್ಲ. ಮಕ್ಕಳಿಗೆ ಪಾಸ್‌ಪೋರ್ಟ್‌ ಮಾಡಿಸಬೇಕಾದರೂ ಸಹ ಅರ್ಜಿದಾರರು ದಾಖಲೆ ಒದಗಿಸಲು ಸಾಹಸ ಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಲಾಟ್‌ ಪಡೆದವರು ಸಂಜೆವರೆಗೂ ದಾಖಲೆ ಒದಗಿಸಲು ಕಾಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅರ್ಜಿದಾರರು ಕುಳಿತುಕೊಳ್ಳಲು ಕುರ್ಚಿ, ಉಪಯೋಗಿಸಲು ಶೌಚಾಲಯ, ಮಕ್ಕಳು ಇರುವ ತಾಯಂದಿರಿಗೆ ಹಾಲುಣಿಸುವ ಕೊಠಡಿ, ಕುಡಿಯುವ ನೀರು.... ಹೀಗೆ ಸೌಲಭ್ಯಗಳೇ ಇಲ್ಲ.

ಕಚೇರಿ ಪಕ್ಕದಲ್ಲಿಯೇ ಇರುವ ಅಂಚೆ ಕಚೇರಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. ಅವರು ಇಡೀ ದಿನ ಕಚೇರಿ ಹೊರಗೆ ಬಿಸಿಲಿನಲ್ಲಿ ಕಾಯಬೇಕು. ಇಲ್ಲವಾದಲ್ಲಿ ಸಮೀಪದಲ್ಲಿ ಇರುವ ಮರದ ಕೆಳಗೆ ವಿಶ್ರಮಿಸಬೇಕು. ಯಾವಾಗಾದರೂ ಟೋಕನ್‌ ಕರೆಯಬಹುದು ಎಂಬ ಆತಂಕದಿಂದ ಕಚೇರಿಯ ಮುಂದೆ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ರಾಬರ್ಟಸನ್‌ಪೇಟೆಯ ಪಾಸ್‌ ಪೋರ್ಟ್‌ ಸೇವಾ ಕೇಂದ್ರ

ಮಳೆ ಚಳಿ ಬಿಸಿಲಿಗೆ ಮೈಯೊಡ್ಡಿ ಹೊರಗೆ ನಿಲ್ಲಬೇಕು

ಮೆಕ್ಕಾ ಮದಿನಾಗೆ ಹೋಗಲು ಪಾಸ್‌ಪೋರ್ಟ್‌ ಪಡೆಯಲು ಕುಟುಂಬ ಸಮೇತ ಬಂದಿದ್ದೇವೆ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಗುವನ್ನು ನೋಡಿಕೊಳ್ಳುವ ಜಾಗ ಕೂಡ ಇಲ್ಲ. ಬೆಂಗಳೂರಿನ ಎರಡೂ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಎಲ್ಲಾ ರೀತಿಯ ಆಧುನಿಕ ಸೌಲಭ್ಯ ನೀಡಲಾಗಿದೆ. ಕೆಜಿಎಫ್‌ನಲ್ಲಿ ನಿಂತುಕೊಳ್ಳಲು ಜಾಗ ಇಲ್ಲ. ಮಳೆ ಮತ್ತು ಚಳಿಗೆ ಮೈಯೊಡ್ಡಿ ಹೊರಗೆ ನಿಲ್ಲಬೇಕಿದೆ ಎಂದು ಚಿಕ್ಕಬಳ್ಳಾಪುರದಿಂದ ಪಾಸ್‌ಪೋರ್ಟ್‌ ಪಡೆಯಲು ಬಂದಿದ್ದ ಹಬೀಬ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.