ADVERTISEMENT

ಸಂಘಟನೆ ನಿಷೇಧಿಸಿದರೆ ಶಾಂತಿ ನೆಲೆಸಿತೆಂಬ ಭ್ರಮೆ ಬೇಡ: ಎಚ್‌ಡಿಕೆ

ತ್ರಿಶೂಲ, ಲಾಠಿ ಕೊಡುವುದು ಯಾವ ಸಂದೇಶ? 

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 11:46 IST
Last Updated 29 ಸೆಪ್ಟೆಂಬರ್ 2022, 11:46 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ    

ಮುಳಬಾಗಿಲು (ಕೋಲಾರ ಜಿಲ್ಲೆ): ‘ನೂರಾರು ವರ್ಷ ಕಾಲ ಈ ದೇಶ ಆಳಿದ ಮೊಗಲರಿಗೇ ಹಿಂದೂ ದೇಶವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡಲು ಸಾಧ್ಯವಾಗಲಿಲ್ಲ. ಯಾವುದೋ ಒಂದು ಸಂಘಟನೆಯಿಂದ ಇಸ್ಲಾಮಿಕ್‌ ರಾಷ್ಟ್ರ ಮಾಡಲು ಸಾಧ್ಯವೇ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ಸಂಘಟನೆ ನಿಷೇಧಿಸಿದ ತಕ್ಷಣ ಶಾಂತಿ ನೆಲೆಸಿಬಿಡುತ್ತದೆ ಎಂಬ ಭ್ರಮೆ ಬೇಡ. ನಾನೂ ಸರ್ಕಾರ ನಡೆಸಿದ್ದೇನೆ. ಆರ್‌ಎಸ್‌ಎಸ್‌ ಅನ್ನು ಕೂಡ ಹಿಂದೆ ನಿಷೇಧ ಮಾಡಲಾಗಿತ್ತು’ ಎಂದರು.

‘ಒಂದು ಸಂಘಟನೆಗೆ ತ್ರಿಶೂಲ, ಲಾಠಿ ಕೊಟ್ಟು ತರಬೇತಿ ನೀಡುವುದು ಯಾವ ಸಂದೇಶ ನೀಡುತ್ತದೆ? ವಾಸ್ತವಾಂಶ ಮಾತನಾಡಬೇಕು. ತ್ರಿಶೂಲ ಇಟ್ಟುಕೊಂಡು ಮೆರವಣಿಗೆ ಮಾಡುವುದಕ್ಕೆ ಏಕೆ ಪ್ರೋತ್ಸಾಹ ಕೊಡುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಪರಸ್ಪರ ಸಹೋದರ ಮನೋಭಾವ ಹಾಗೂ ಭಾವೈಕ್ಯ ಗಟ್ಟಿ ಮಾಡುವ ಸಂದೇಶಗಳು ಸರ್ಕಾರದಿಂದ ಬಾರದಿದ್ದರೆ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಂಡರೂ ಸಮಾಜವನ್ನು ಸರಿ ದಾರಿಯಲ್ಲಿ ಕರೆದುಕೊಂಡು ಹೋಗುವುದು ಕಷ್ಟ. ಬದಲಾಗಿ ಕಲುಷಿತ ವಾತಾರಣ ನಿರ್ಮಾಣಕ್ಕೆ ಪ್ರೇರೇಪಣೆ ಆಗುತ್ತದೆ. ಜನರಲ್ಲಿ ಭಯದ ವಾತಾವರಣ, ಆತಂಕ ಉಂಟು ಮಾಡಬಾರದು’ ಎಂದು ಸಲಹೆ ನೀಡಿದರು.


‘ಯಾವ ಕಾರಣಕ್ಕೆ ಪಿಎಫ್‌ಐ ನಿಷೇಧ ಮಾಡಲಾಗಿದೆ ಎಂಬ ಬಗ್ಗೆ ಸರ್ಕಾರವು ಜನರ ಮುಂದೆ ಸಾಕ್ಷ್ಯಾಧಾರ ಇಡಬೇಕು’ ಎಂದು ಆಗ್ರಹಿಸಿದರು.

‘ಪ್ರತಿಪಕ್ಷದ ನಾಯಕರ ಹೇಳಿಕೆಯನ್ನೂ ಗಮನಿಸುತ್ತಿದ್ದೇನೆ. ಯಾವ ಸಂಘಟನೆ ನಿಷೇಧಿಸಬೇಕು, ಯಾವುದನ್ನು ನಿಷೇಧಿಸಬಾರದು ಎಂಬು‌ದಕ್ಕೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಆ ಸಂಘಟನೆಗಳ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ನನ್ನ ಸಹಮತ ಇದೆ. ವಿದೇಶದಿಂದ ಹಣ ಪಡೆದು ಇಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸುವುದಕ್ಕೂ ನನ್ನ ಬೆಂಬಲವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.