ADVERTISEMENT

ಕೋಲಾರ | ಶಾಂತಿಧೂತನ ಸ್ಮರಣೆ: ಕಳೆಗಟ್ಟಿದ ಕ್ರಿಸ್‌ಮಸ್‌

ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿನಾದ: ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 13:13 IST
Last Updated 25 ಡಿಸೆಂಬರ್ 2021, 13:13 IST
ಕ್ರಿಸ್‌ಮಸ್‌ ಅಂಗವಾಗಿ ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಸಮುದಾಯದವರು ಪಾಲ್ಗೊಂಡರು
ಕ್ರಿಸ್‌ಮಸ್‌ ಅಂಗವಾಗಿ ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಸಮುದಾಯದವರು ಪಾಲ್ಗೊಂಡರು   

ಕೋಲಾರ: ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಶಾಂತಿಧೂತ ಯೇಸು ಕ್ರಿಸ್ತನ ಜನ್ಮ ದಿನದ ಸಂಕೇತವಾದ ಕ್ರಿಸ್‌ಮಸ್‌ ಹಬ್ಬವನ್ನು ಶನಿವಾರ ಸಡಗರದಿಂದ ಆಚರಿಸಿದರು.

ಕುಟುಂಬ ಸದಸ್ಯರೊಂದಿಗೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ಯೇಸು ಕ್ರಿಸ್ತನ ಶಿಲುಬೆ ಹಾಗೂ ಸಂತ ಮೇರಿಯಮ್ಮನ ಮೂರ್ತಿ ಮುಂದೆ ನಿಂತು ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಪ್ರಾರ್ಥನೆ ನಡೆಯಿತು. ಕೆಲ ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿಯೇ ಪ್ರಾರ್ಥನೆ ಸಲ್ಲಿಸಲಾಯಿತು.

ಮನೆ ಮತ್ತು ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ ಹಬ್ಬ ಆಚರಿಸಿದರು. ಅಲ್ಲದೇ, ಯೇಸು ಕ್ರಿಸ್ತರ ಜನನ ವೃತ್ತಾಂತ ಸಂಕೇತಿಸುವ ಗೋದಲಿ ನಿರ್ಮಿಸಿದ್ದರು. ಮನೆಗಳನ್ನು ನಕ್ಷತ್ರಾಕೃತಿಯ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು.

ADVERTISEMENT

ಜಿಲ್ಲಾ ಕೇಂದ್ರದ ಪ್ರಮುಖ ಚರ್ಚ್‌ಗಳಾದ ಮೆಥೋಡಿಸ್ಟ್ ಹಾಗೂ ಸಂತ ಮೇರಿಯಮ್ಮ ಚರ್ಚ್‌ಗಳಿಗೆ ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಅಲಂಕಾರಿಕ ಕ್ರಿಸ್‌ಮಸ್‌ ಟ್ರೀಗಳು ಚರ್ಚ್‌ನ ಸೌಂದರ್ಯ ಇಮ್ಮಡಿಗೊಳಿಸಿದವು. ಚರ್ಚ್‌ ಆವರಣದಲ್ಲಿ ರೂಪಿಸಿದ್ದ ಗೋದಲಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಸಂತ ಮೇರಿಯಮ್ಮ ಚರ್ಚ್‌ನಲ್ಲಿ ಸಮುದಾಯದವರು ಮೇಣದ ಬತ್ತಿ ಹಚ್ಚಿ ಭಕ್ತಿ ಪ್ರದರ್ಶಿಸಿದರು. ಸ್ನೇಹಿತರು ಹಾಗೂ ಸಂಬಂಧಿಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬೆತ್ತನಿ, ಈಲಂ, ಮಂಗಸಂದ್ರ, ನಡುಪಲ್ಲಿ, ಚಿನ್ನಾಪುರ, ವೇಮಗಲ್‌, ವಕ್ಕಲೇರಿ ಹಾಗೂ ಹರಳಕುಂಟೆ ಗ್ರಾಮದ ಚರ್ಚ್‌ಗಳಲ್ಲೂ ಕ್ರಿಸ್‌ಮಸ್‌ ಆಚರಣೆ ಅದ್ಧೂರಿಯಾಗಿ ನಡೆಯಿತು.

ಬಹುತೇಕ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರಾರ್ಥನೆ ನಡೆಯಿತು. ಬೈಬಲ್‌ ಪಠಿಸಲಾಯಿತು. ಸಾಂಟಾ ಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಕೇಕ್‌ ಮತ್ತು ಚಾಕೋಲೆಟ್‌ ಉಡುಗೊರೆಯಾಗಿ ನೀಡಿದರು. ಅನ್ಯ ಧರ್ಮೀಯರು ಚರ್ಚ್‌ಗಳಿಗೆ ಆಗಮಿಸಿ ಹಬ್ಬದ ಸಂಭ್ರಮ ಕಣ್ತುಂಬಿಕೊಂಡರು.

ಹಬ್ಬದೂಟದ ಘಮಲು: ಬೇಕರಿಗಳಲ್ಲಿ ಹಬ್ಬಕ್ಕಾಗಿಯೇ ವಿವಿಧ ಕೇಕ್‌ ಸಿದ್ಧಪಡಿಸಲಾಗಿತ್ತು. ಬೇಕರಿಗಳಲ್ಲಿ ಕೇಕ್‌ ವಹಿವಾಟು ಜೋರಾಗಿತ್ತು. ಮಹಿಳೆಯರು ಮನೆಗಳಲ್ಲಿ ವಿಶೇಷ ಭಕ್ಷ್ಯ ಸಿದ್ಧಪಡಿಸಿದ್ದರು. ಮೊಟ್ಟೆ ಕಜ್ಜಾಯ, ಕರ್ಜಿಕಾಯಿ, ಕಲ್‌ಕಲಾ, ಕೋಡುಬಳೆ, ಚಕ್ಕುಲಿ, ಜಾಮೂನು, ರವೆ ಉಂಡೆ, ಕರಿದ ಅವಲಕ್ಕಿ (ಚುವಡಾ), ರೋಸ್‌ ಕುಕ್‌, ನಿಪ್ಪಟ್ಟು, ಫಿರ್ನಿ, ಕ್ಯಾರೆಟ್‌ ಹಲ್ವಾ, ಡೋನಟ್ಸ್‌, ಅಕ್ಕಿ ಮಿಠ್ಠಾ ತಯಾರಿಸಿದ್ದರು.

ಮನೆಗಳಲ್ಲಿ ಬಿರಿಯಾನಿ, ಕಬಾಬ್‌ ಘಮಲು ಹರಡಿತ್ತು. ಮನೆ ಮಂದಿಯೆಲ್ಲಾ ಹಬ್ಬದೂಟ ಸವಿದು ಸಂಭ್ರಮಿಸಿದರು. ಜತೆಗೆ ಸ್ನೇಹಿತರು, ಸಂಬಂಧಿಕರು ಹಾಗೂ ನೆರೆ ಹೊರೆಯವರಿಗೆ ಹಬ್ಬದ ಆತಿಥ್ಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.