
ಕೆಜಿಎಫ್: ನಗರದ ಹೊರವಲಯದ ಪೆದ್ದಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ, ಸಿರಿಗನ್ನಡ ವೇದಿಕೆ ಮತ್ತು ಗಂಗಾ ನಿಕೇತನ ಫೌಂಡೇಶನ್ ವತಿಯಿಂದ ವಿಶ್ವ ಮಾನವ ದಿನಾಚರಣೆ ಆಚರಿಸಲಾಯಿತು.
ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ರಾಮಚಂದ್ರಪ್ಪ ಮಾತನಾಡಿ, ಯುಗದ ಕವಿ ಜಗದ ಕವಿ ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದರು. ಜಾತಿ ಮತ ಭೇದವಿಲ್ಲದೆ ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್ ಅವರ ತತ್ವಗಳನ್ನು ಕುವೆಂಪು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಅರ್ಪಿಸಿದರು. ಪಂಚ ಸೂತ್ರಗಳಾದ ಮನುಜ ಮತ, ವಿಶ್ವಪಥ, ಸಮನ್ವಯತೆ, ಸರ್ವೋದಯ ಮತ್ತು ಪೂರ್ಣ ದೃಷ್ಟಿ ಸೂತ್ರಗಳಲ್ಲಿ ವಿಶ್ವಮಾನವ ಸಂದೇಶ ಕಾಣಬಹುದು ಎಂದು ತಿಳಿಸಿದರು.
ಮಗು ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ಜಾತಿ, ಮತ, ಪಂಥ ಇವುಗಳನ್ನು ಅಳವಡಿಸಿಕೊಂಡು ಅಲ್ಪ ಮಾನವನಾಗುತ್ತಾನೆ. ಅಲ್ಪ ಮಾನವನನ್ನು ವಿಶ್ವಮಾನವನ್ನಾಗಿ ಮಾಡುವುದೇ ಅನಿಕೇತನ ಎಂದರು. ಈಗಿನ ಮಕ್ಕಳು ಎಲ್ಲವನ್ನು ಮೈಗೂಡಿಸಿಕೊಂಡು ಅನಿಕೇತನಾಗಿ ಹೊರಹೊಮ್ಮಬೇಕು ಎಂದರು.
ಕೆಜಿಎಫ್ ನಗರದಲ್ಲಿ ಕನ್ನಡವನ್ನು ಮಾತನಾಡುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಇಲ್ಲಿನ ಹೋರಾಟಗಾರರು ಸಾಕಷ್ಟು ಶ್ರಮ ವಹಿಸಿದ್ದಾರೆ. ಈಗ ಕಾಲ ಬದಲಾಗಿದೆ. ತಮಿಳು ಭಾಷೆಯವರು ಕೂಡ ಕನ್ನಡ ಕಲಿಯಲು ಆರಂಭಿಸಿದ್ದಾರೆ. ನಾಡು ನುಡಿಯನ್ನು ಗೌರವಿಸುತ್ತಿದ್ದಾರೆ ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮದಿರಪ್ಪ ತಿಳಿಸಿದರು.
ಲೇಖಕ ಎನ್.ಆರ್.ಪುರುಷೋತ್ತಮ್ ಮಾತನಾಡಿ, ಶಾಲೆಗೆ ಬರುವ ಮಕ್ಕಳು ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಯಾವುದೇ ಭಾಷೆಯಾಗಿರಲಿ ಮನೆಯಿಂದ ಹೊರಗೆ ಬಂದರೆ ಕನ್ನಡವನ್ನೇ ಕಡ್ಡಾಯವಾಗಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸಾಧಕರನ್ನು ಗೌರವಿಸಲಾಯಿತು. ರವಿಕುಮಾರ್, ಫ್ರೂಟ್ಸ್ ಮಂಜು, ತಾರಾನಾಥ್, ರಾಧಾಪ್ರಕಾಶ್, ಸೀನಪ್ಪ, ಪ್ರದೀಪ್, ನಂಜುಂಡಪ್ಪ, ಲಕ್ಷ್ಮಿ, ಮಲ್ಲಿಕಾ, ಕವಿತಾ, ಆಶಾ ಜ್ಯೋತಿ, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.