ADVERTISEMENT

ಬಾಕಿ ಆಸ್ತಿ ತೆರಿಗೆ ವಸೂಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 16:06 IST
Last Updated 6 ಮೇ 2020, 16:06 IST
ನಗರಸಭೆ ಅಧಿಕಾರಿಗಳು ಕೋಲಾರದ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿ ಕಟ್ಟಡ ಮಾಲೀಕರಿಂದ ಆಸ್ತಿ ತೆರಿಗೆ ವಸೂಲಿ ಮಾಡಿದರು.
ನಗರಸಭೆ ಅಧಿಕಾರಿಗಳು ಕೋಲಾರದ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿ ಕಟ್ಟಡ ಮಾಲೀಕರಿಂದ ಆಸ್ತಿ ತೆರಿಗೆ ವಸೂಲಿ ಮಾಡಿದರು.   

ಕೋಲಾರ: ‘ನಗರವಾಸಿಗಳು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್ ಮನವಿ ಮಾಡಿದರು.

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಕಟ್ಟಡಗಳ ಮೇಲೆ ಬುಧವಾರ ದಾಳಿ ನಡೆಸಿ ಮಾತನಾಡಿ, ‘ನಗರಸಭೆ ಸಿಬ್ಬಂದಿ ವೇತನ ಹಾಗೂ ದೈನಂದಿನ ಕಾರ್ಯ ಚಟುವಟಿಕೆ ನಿರ್ವಹಣೆಗೆ ತಿಂಗಳಿಗೆ ಸುಮಾರು ₹ 2 ಕೋಟಿ ಹಣ ಬೇಕು. ಸಿಬ್ಬಂದಿಗೆ ವೇತನ ಕೊಡಲು ನಗರಸಭೆಯಲ್ಲಿ ಹಣವಿಲ್ಲ’ ಎಂದರು.

‘ನಗರದಲ್ಲಿ ಸುಮಾರು 23 ಸಾವಿರ ಖಾತೆಗಳಿವೆ. ವರ್ಷಕ್ಕೆ ₹ 3.80 ಕೋಟಿ ತೆರಿಗೆ ಸಂಗ್ರಹಣೆ ಗುರಿ ಹೊಂದಲಾಗಿದೆ. ಹಿಂದಿನ ವರ್ಷಗಳ ಸುಮಾರು ₹ 1.20 ಕೋಟಿ ತೆರಿಗೆ ಬಾಕಿಯಿದೆ. ತೆರಿಗೆದಾರರಿಗೆ ಹಲವು ಬಾರಿ ನೋಟಿಸ್‌ ಕೊಟ್ಟರೂ ತೆರಿಗೆ ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರ ತೆರಿಗೆ ಪಾವತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿದ್ದು, ತೆರಿಗೆದಾರರು ಇದರ ಸದುಪಯೋಗ ಪಡೆಯಬೇಕು. ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಕೆಲವರ ಬಳಿ ಹಣ ಇಲ್ಲವಾಗಿದೆ. ಮತ್ತೆ ಕೆಲವರ ಬಳಿ ಹಣವಿದ್ದರೂ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಕಂದಾಯ ಅಧಿಕಾರಿಗಳು ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಜಾರಿಗೊಳಿಸಿ ಎಚ್ಚರಿಕೆ ನೀಡುತ್ತಿದ್ದಾರೆ’ ಎಂದು ವಿವರಿಸಿದರು.

‘ತೆರಿಗೆ ಹಣದಿಂದಲೇ ನಗರದ ಅಭಿವೃದ್ಧಿ ಆಗಬೇಕು. ತೆರಿಗೆದಾರರು ಸಕಾಲಕ್ಕೆ ತೆರಿಗೆ ಕಟ್ಟದಿದ್ದರೆ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ತೆರಿಗೆದಾರರು ಈ ಸಂಗತಿ ಅರಿತು ಶೀಘ್ರವೇ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಕಟ್ಟಡಗಳಿಗೆ ಬೀಗ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸ್ಥಳದಲ್ಲೇ ವಸೂಲಿ: 10 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡ  ಎಂ.ಬಿ.ರಸ್ತೆಯ ವಾಣಿಜ್ಯ ಕಟ್ಟಡವೊಂದರ ಮಾಲೀಕ ಜಯರಾಮರೆಡ್ಡಿ ಎಂಬುವರು ಸ್ಥಳದಲ್ಲೇ ಚೆಕ್ ಮೂಲಕ ₹ 3.85 ಲಕ್ಷ ತೆರಿಗೆ ಪಾವತಿಸಿದರು.

ಬಳಿಕ ನಗರದ ಎಂ.ಬಿ ರಸ್ತೆ, ಅಮ್ಮವಾರಿಪೇಟೆ, ಮೆಕ್ಕೆ ವೃತ್ತ, ಎಂ.ಜಿ ರಸ್ತೆ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದ 50 ಮಂದಿ ವಾಹನ ಸವಾರರನ್ನು ತಡೆದು ತಲಾ ₹ 100ರಂತೆ ₹ 5 ಸಾವಿರ ದಂಡ ವಿಧಿಸಿದರು.ನಗರಸಭೆ ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.