ADVERTISEMENT

ಪರಿಸರಕ್ಕೆ ಶಾಪವಾದ ಪ್ಲಾಸ್ಟಿಕ್

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಂಜುನಾಥ್‌ ಕಳವಳ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 13:51 IST
Last Updated 5 ಡಿಸೆಂಬರ್ 2019, 13:51 IST
ಕೋಲಾರದಲ್ಲಿ ಗುರುವಾರ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶಿಸಿದರು.   

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಪರಿಸರ ರಕ್ಷಣೆ ಹಾಗೂ ಹಸಿರು ಸಂಪತ್ತು ವೃದ್ಧಿಸುವ ಅವಶ್ಯಕತೆ ಹೆಚ್ಚಿದೆ. ಸ್ವಚ್ಛತೆ ಹಾಗೂ ಹಸಿರು ಇದ್ದಲ್ಲಿ ಆರೋಗ್ಯ ಇರುತ್ತದೆ’ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಂಜುನಾಥ್‌ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಮನುಕುಲದ ಬಳಕೆಗೆಂದು ಕಂಡುಹಿಡಿದ ಪ್ಲಾಸ್ಟಿಕ್ ಪರಿಸರಕ್ಕೆ ಶಾಪವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಕಂಡು ಹಿಡಿದಾಗಲೇ ಮರುಬಳಕೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದರೆ ಪರಿಸರ ಹಾನಿ ತಪ್ಪಿಸಬಹುದಿತ್ತು. ಸರ್ಕಾರ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೂ ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಪರಿಸರ ಕಾಪಾಡಬೇಕು ಮತ್ತು ಮರ ಗಿಡ ಬೆಳೆಸಬೇಕು. ವಿದ್ಯಾರ್ಥಿಗಳು ಒಂದೊಂದು ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತು ಬಳಸುವುದಿಲ್ಲ ಎಂದು ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪರಿಷತ್‌ ಈ ಹಿಂದೆ ಆಯೋಜಿಸಿದ್ದ ವಿಜ್ಞಾನ ಪ್ರದರ್ಶನದಲ್ಲಿ ಜಿಲ್ಲೆಯ ಮಕ್ಕಳು ಬಹುಮಾನ ಪಡೆದು ರಾಷ್ಟ್ರ ಮಟ್ಟಕ್ಕೆ ಹೋಗಿದ್ದಾರೆ. ಮಕ್ಕಳು ವಿಜ್ಞಾನ ಮಾದರಿಯ ಅಂಶಗಳನ್ನು ಸ್ಪಷ್ಟವಾಗಿ ಹಾಗೂ ನಿಖರವಾಗಿ ಮಂಡಿಸಬೇಕು’ ಎಂದು ರಾಜ್ಯ ವಿಜ್ಞಾನ ಪರಿಷತ್ತು ಗೌರವಾಧ್ಯಕ್ಷ ಕೆ.ಪ್ರಹ್ಲಾದರಾವ್ ಕಿವಿಮಾತು ಹೇಳಿದರು.

ಆಹಾರ ಕಳಪೆ: ‘ಆಚಾರ, ವಿಚಾರ, ಮೌಲ್ಯಗಳು ಕುಸಿದಾಗ ಸಂತರು ಹಾಗೂ ಆಚಾರ್ಯರು ದೇಶದ ಹೆಮ್ಮೆ ಎತ್ತಿ ಹಿಡಿದಿದ್ದರು. ಆಧುನಿಕ ಜೀವನ ಶೈಲಿಯಲ್ಲಿ ಆಚಾರ ವಿಚಾರ ನಗಣ್ಯವಾಗಿವೆ. ನೀರು, ವಾಯು, ಪರಿಸರ ಮಾಲಿನ್ಯ ಹೆಚ್ಚಿದೆ. ತಿನ್ನುವ ಆಹಾರ ಸಹ ಕಳಪೆಯಾಗಿದೆ’ ಎಂದು ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಕೆ.ಶಿವಣ್ಣ ವಿಷಾದಿಸಿದರು.

‘ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೆ ಅನೇಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು’ ಎಂದು ಸಲಹೆ ನೀಡಿದರು.

‘ಸೂರ್ಯಕಾಂತಿ ಬೀಜ ಪ್ರತಿ ಕೆ.ಜಿಗೆ ₹ 100 ಇದೆ. ಒಂದು ಲೀಟರ್ ಎಣ್ಣೆ ತೆಗೆಯಲು 4 ಕೆ.ಜಿ ಬೀಜ ಬೇಕು. ಅಂದರೆ ಸೂರ್ಯಕಾಂತಿ ಬೀಜಕ್ಕೆ ₹ 400ಕ್ಕೂ ಹೆಚ್ಚು ವೆಚ್ಚ ಮಾಡಿದರೆ ಒಂದು ಲೀಟರ್‌ ಎಣ್ಣೆ ಸಿಗುತ್ತದೆ. ಹೀಗಾಗಿ ಎಣ್ಣೆ ಯಾವ ಮಟ್ಟದಲ್ಲಿ ಕಳಪೆ ಆಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಆರೋಗ್ಯ ಸಮಸ್ಯೆ: ‘ಮಕ್ಕಳು ದೀರ್ಘಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುವುದಕ್ಕೆ ವಿಟಮಿನ್ ಡಿ ಕೊರತೆ ಪ್ರಮುಖ ಕಾರಣ. ಪೋಷಕರು ಮಕ್ಕಳನ್ನು ಬಿಸಿಲಿಗೆ ಹೋಗಲು ಹಾಗೂ ಮಣ್ಣಿನಲ್ಲಿ ಆಟವಾಡಲು ಬಿಡುವುದಿಲ್ಲ. ಇದೇ ಕಾರಣಕ್ಕೆ ತಲೆಗೂದಲು ಉದುರುತ್ತದೆ. ಮಕ್ಕಳು ಆರೋಗ್ಯ ಕಾಪಾಡಿಕೊಂಡು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಬೇಕು’ ಎಂದು ತಿಳಿಸಿದರು.

ಜಿಲ್ಲೆಯ ಸುಮಾರು 40 ಶಾಲೆಗಳ 208 ಮಕ್ಕಳು ಸಮಾವೇಶದಲ್ಲಿ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ರೋಟರಿ ಅಧ್ಯಕ್ಷ ವೆಂಕಟರಮಣಪ್ಪ, ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಸಂಯೋಜಕಿ ವಿ.ಮಂಜುಳಾ ಭೀಮರಾವ್, ಸದಸ್ಯರಾದ ಶಿವಕುಮಾರ್, ಸೌಮ್ಯ, ಶೈಲಜಾ, ಜಯಸಿಂಹ, ವಿಜ್ಞಾನ ಲೇಖಕ ಪುರುಷೋತ್ತಮ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.