ADVERTISEMENT

ಪ್ಲಾಸ್ಟಿಕ್‌ ಬಳಕೆ: ಜೀವರಾಶಿಗೆ ಅಪಾಯ

ಜಾಗೃತಿ ಅಭಿಯಾನದಲ್ಲಿ ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ ಕಳವಳ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:13 IST
Last Updated 12 ಫೆಬ್ರುವರಿ 2021, 15:13 IST
ಜಿಲ್ಲಾ ನೆಹರೂ ಯುವ ಕೇಂದ್ರವು ಕೋಲಾರದ ವಿವಿಧೆಡೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನದಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಪಾಲ್ಗೊಂಡರು.
ಜಿಲ್ಲಾ ನೆಹರೂ ಯುವ ಕೇಂದ್ರವು ಕೋಲಾರದ ವಿವಿಧೆಡೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನದಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಪಾಲ್ಗೊಂಡರು.   

ಕೋಲಾರ: ‘ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ’ ಎಂದು ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ನೆಹರೂ ಯುವ ಕೇಂದ್ರವು ನಗರದ ಪಿ.ಸಿ.ಬಡಾವಣೆ, ಹಾರೋಹಳ್ಳಿ ಹಾಗೂ ವೀರಾಂಜನೇಯ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನದಲ್ಲಿ ಮನೆ ಮನೆಗೆ ಕರಪತ್ರ ವಿತರಿಸಿ ಮಾತನಾಡಿದರು.

‘ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತಕ್ಕಾಗಿ ಸ್ವಚ್ಛತಾ ಆಂದೋಲನ ಜಾರಿಗೊಳಿಸಿದೆ. ಜತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ನಿಷೇಧಿಸಿದೆ. ಪ್ಪಾಸ್ಟಿಕ್‌ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಅಥವಾ ಡಬ್ಬ ರಸ್ತೆಗೆ ಬಿಸಾಡಬಾರದು. ತರಕಾರಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಮನೆಯಂಗಳದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಸಿಕೊಂಡು ಗಿಡ ಬೆಳೆಸಬಹುದು. ಆಹಾರ ಪದಾರ್ಥ ಅಥವಾ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಹೋಗುವಾಗ ಜತೆಯಲ್ಲಿ ಬಟ್ಟೆ ಅಥವಾ ಸೆಣಬಿನ ಕೈ ಚೀಲ ಕೊಂಡೊಯ್ಯಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಕವರ್‌ ಬಳಕೆ ಕಡಿಮೆ ಮಾಡಬೇಕು’ ಎಂದು ತಿಳಿಸಿದರು.

ಜೀವಕ್ಕೆ ಕುತ್ತು: ‘ಪ್ಲಾಸ್ಟಿಕ್‌ ವಸ್ತುಗಳು ಪ್ರಾಣಿ ಪಕ್ಷಿಗಳ ಜೀವಕ್ಕೆ ಕುತ್ತು ತರುತ್ತಿವೆ. ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಜಾನುವಾರುಗಳು ಮೃತಪಡುವುದು ಸಾಮಾನ್ಯವಾಗಿದೆ. ಆದರೂ ಜನರು ಅರಿವಿಲ್ಲದೆ ಪ್ಲಾಸ್ಟಿಕ್‌ ಕವರ್‌ ಬಳಸುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ನಿರುಪಯುಕ್ತ ಪ್ಲಾಸ್ಟಿಕ್‌ ಕವರ್‌ಗಳನ್ನು ಸುಟ್ಟರೆ ವಿಷಕಾರಿ ರಾಸಾಯನಿಕ ಗಾಳಿಯಲ್ಲಿ ಸೇರಿ ವಾಯುಮಾಲಿನ್ಯವಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನರಿಗೆ ಅರಿವು ಮೂಡಿಸಿದರೆ ಶೇ 50ರಷ್ಟು ವಾಯಮಾಲಿನ್ಯ ನಿಯಂತ್ರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಪ್ರಾಕೃತಿಕ ಅಸಮತೋಲನ: ‘ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳುತ್ತಿವೆ. ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಆತಂಕ ವ್ಯಕ್ತಪಡಿಸಿದರು.

‘ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮನಬಂದಂತೆ ಬೀದಿ ಬದಿಯಲ್ಲಿ ಅಥವಾ ಚರಂಡಿಯಲ್ಲಿ ಎಸೆಯಬಾರದು. ಬದಲಿಗೆ ಪೌರ ಕಾರ್ಮಿಕರಿಗೆ ಕಸ ವಿಲೇವಾರಿ ಮಾಡಬೇಕು. ಜತೆಗೆ ಒಣ ಮತ್ತು ಹಸಿ ಕಸ ಪ್ರತ್ಯೇಕಿಸಿ ಕೊಡಬೇಕು. ಪ್ಲಾಸ್ಟಿಕ್ ಬಳಕೆ ನಿರ್ಬಂಧದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಮೊದಲು ನಾವು ಬದಲಾಗಿ ಇತರರಿಗೆ ಮಾದರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸರಣ್ಯಾ, ಜನಸೇವಾ ಸಂಘಟನೆ ಜಿಲ್ಲಾ ಅಧ್ಯಕ್ಷ ಆನಂದ್, ಆರ್.ಶ್ರೀನಿವಾಸನ್, ಕ್ರೇಜಿ ಕ್ರಿಯೇಟರ್ಸ್ ಸಂಘದ ಸದಸ್ಯರಾದ ಮಹೇಶ್‌ರಾವ್ ಕದಂ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.