ADVERTISEMENT

ಕನ್ನಕಳವು ತಡೆಗೆ ‘ಪೊಲೀಸ್‌ ಐ’ ಯೋಜನೆ

ಜನರ ಮನೆಗೆ ಸಿ.ಸಿ ಕ್ಯಾಮೆರಾ ಕಣ್ಗಾವಲು: ಎಸ್ಪಿ ಕಾರ್ತಿಕ್‌ರೆಡ್ಡಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 6:15 IST
Last Updated 20 ಸೆಪ್ಟೆಂಬರ್ 2019, 6:15 IST
‘ಪೊಲೀಸ್ ಐ’ ಯೋಜನೆಯ ಸಿ.ಸಿ ಕ್ಯಾಮೆರಾಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಕೋಲಾರ ಗುರುವಾರ ಮಾಹಿತಿ ನೀಡಿದರು.
‘ಪೊಲೀಸ್ ಐ’ ಯೋಜನೆಯ ಸಿ.ಸಿ ಕ್ಯಾಮೆರಾಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಕೋಲಾರ ಗುರುವಾರ ಮಾಹಿತಿ ನೀಡಿದರು.   

ಕೋಲಾರ: ‘ಕನ್ನಕಳವು ತಡೆಗೆ ಜಿಲ್ಲೆಯಲ್ಲಿ ಸಾರ್ವಜನಿಕರ ಮನೆ ಕಾವಲಿಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಯೋಜನೆ ಜಾರಿಗೆ ತರಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕನ್ನಕಳವು ನಡೆದಲ್ಲಿ ಆರೋಪಿಗಳ ಪತ್ತೆಗೆ ಇಲಾಖೆಯು ಈಗಾಗಲೇ ಕೋಲಾರ ‘ಪೊಲೀಸ್ ಐ’ ಯೋಜನೆ ಜಾರಿಗೊಳಿಸಿದ್ದು, ಯೋಜನೆಗೆ ಪ್ರಾಯೋಗಿಕವಾಗಿ 30 ಸಿ.ಸಿ ಕ್ಯಾಮೆರಾ ತರಿಸಲಾಗಿದೆ’ ಎಂದರು.

‘ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಹೊರ ಹೋಗುವ ಸಂದರ್ಭದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಠಾಣೆಯಿಂದಲೇ ಮನೆಗೆ ಉಚಿತವಾಗಿ ಸದರಿ ಸಿ.ಸಿ ಕ್ಯಾಮೆರಾ ಕಣ್ಗಾವಲು ಸೇವೆ ಒದಗಿಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಸಿ.ಸಿ ಕ್ಯಾಮೆರಾಗಳು ಸುಧಾರಿತ ತಂತ್ರಜ್ಞಾನ ವ್ಯವಸ್ಥೆ (ಮೋಷನ್ ಸೆನ್ಸರ್) ಒಳಗೊಂಡಿದ್ದು, ಅಪರಿಚಿತರು ಮನೆಯೊಳಗೆ ಹೋದರೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ. ಜತೆಗೆ ಮನೆ ಮಾಲೀಕರ ಮೊಬೈಲ್‌ಗೆ ಈಸಿ ಕ್ಯಾಮ್ ಆ್ಯಪ್‌ನ ಮೂಲಕ ಸಂದೇಶ ರವಾನೆಯಾಗುತ್ತದೆ. ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ’ ಎಂದು ವಿವರಿಸಿದರು.

‘ಆಂಧ್ರಪ್ರದೇಶ, ಮಧ್ಯಪ್ರದೇಶ, ದೆಹಲಿಯಲ್ಲಿ ಈ ಯೋಜನೆ ಜಾರಿಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಕೆಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಗಳಿಗೆ ಸಿ.ಸಿ ಕ್ಯಾಮೆರಾ ಕಣ್ಗಾವಲು ಸೇವೆ ಒದಗಿಸಲಾಗುತ್ತಿದೆ. ಈ ಸೇವೆಯ ಅಗತ್ಯವಿದ್ದರೆ ಸಾರ್ವಜನಿಕರು ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 08152 243066 ಅಥವಾ 243173ಕ್ಕೆ ಕರೆ ಮಾಡಬಹುದು’ ಎಂದು ಮಾಹಿತಿ ನೀಡಿದರು.

‘ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಮನೆಗೆ ಬೀಗ ಹಾಕಿಕೊಂಡು ಹೋಗುವಾಗ ಚಿನ್ನಾಭರಣ ಹಾಗೂ ಹಣವನ್ನು ಬ್ಯಾಂಕ್‌ನ ಭದ್ರತಾ ಕಪಾಟಿನಲ್ಲಿ (ಲಾಕರ್) ಇಡಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕಳ್ಳತನ ನಡೆಯುವ ಸಾಧ್ಯತೆ ಹೆಚ್ಚು. ಹೀಗಾಗಿ ಜನ ಮನೆ ಕಾವಲಿಗೆ ಸಿ.ಸಿ ಕ್ಯಾಮೆರಾ ಅಳವಡಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ಅನುದಾನಕ್ಕೆ ಕೋರಿಕೆ: ‘ಜಿಲ್ಲಾ ಕೇಂದ್ರದಲ್ಲಿ ಅಪರಾಧ ತಡೆಗೆ ಈಗಾಗಲೇ 38 ಕಡೆ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ತಾಂತ್ರಿಕ ದೋಷದಿಂದ ಕೆಲವೆಡೆ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆ ಕ್ಯಾಮೆರಾಗಳನ್ನು ರಿಪೇರಿ ಮಾಡಲಾಗಿದೆ. ನಗರದ ಪ್ರಮುಖ ವೃತ್ತ, ರಸ್ತೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲು ನಗರಸಭೆಯ ಅನುದಾನ ಕೋರಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.