ADVERTISEMENT

ವಿವಿಧ ಸಂಘಟನೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ, ಧರಣಿ

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 17:03 IST
Last Updated 25 ಆಗಸ್ಟ್ 2018, 17:03 IST
ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಮುತ್ತಿಗೆ ಹಾಕಿ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿದರು.
ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಮುತ್ತಿಗೆ ಹಾಕಿ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿದರು.   

ಕೋಲಾರ: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ಕಾರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಕಾಲೇಜು ವೃತ್ತ ಹಾಗೂ ಜಿಲ್ಲಾ ಪಂಚಾಯಿತಿ ಬಳಿ ಸಚಿವರ ಕಾರು ತಡೆದ ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ವಿಶೇಷ ಪ್ಯಾಕೇಜ್‌ ನೀಡಬೇಕು. ಸಂಕಷ್ಟದಲ್ಲಿರುವ ರೇಷ್ಮೆ ಹಾಗೂ ಟೊಮೆಟೊ ಬೆಳೆಗಾರರ ಹಿತರಕ್ಷಣೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ಹೈನೋದ್ಯಮವು ಜಿಲ್ಲೆಯ ಜೀವನಾಡಿಯಾಗಿದ್ದು, ಉದ್ಯಮದ ಉಳಿವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಜಾಗದ ಸಮಸ್ಯೆ ಗಂಭೀರವಾಗಿದೆ. ಇದರಿಂದ ರೈತರು. ವರ್ತಕರಿಗೆ ಸಮಸ್ಯೆಯಾಗುತ್ತಿದೆ. ಆದ ಕಾರಣ ಎಪಿಎಂಸಿಗೆ ಹೆಚ್ಚುವರಿ ಜಾಗ ಮಂಜೂರು ಮಾಡಬೇಕು. ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳ ಹರಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಕೆರೆ ಅಂಗಳ, ಗೋಮಾಳ ಹಾಗೂ ಸ್ಮಶಾನಗಳ ಒತ್ತುವರಿ ತೆರವುಗೊಳಿಸಿ, ಸರ್ಕಾರಿ ಜಮೀನು ರಕ್ಷಿಸಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು. ಸರ್ಕಾರಿ ಶಾಲಾ ಕಾಲೇಜುಗಳು ಮತ್ತು ವಿದ್ಯಾರ್ಥಿನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಧರಣಿನಿರತರು ಮನವಿ ಮಾಡಿದರು.

ವೇತನ ಕೊಟ್ಟಿಲ್ಲ: ‘ಗ್ರಾಮ ಪಂಚಾಯಿತಿ ನೌಕರರಿಗೆ ಹಲವು ತಿಂಗಳಿಂದ ವೇತನ ಕೊಟ್ಟಿಲ್ಲ. ಇದರಿಂದ ನೌಕರರಿಗೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಬಡ್ಡಿ ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಆದರೆ, ಅಧಿಕಾರಿಗಳಿಗೆ ನೌಕರರ ಕಷ್ಟದ ಅರಿವಿಲ್ಲ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಅಳಲು ತೋಡಿಕೊಂಡರು.

‘ಅನುಮೋದಿತರಾದ ಹಾಗೂ ಅನುಮೋದಿತರಲ್ಲದ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ, ನೌಕರರ ಬ್ಯಾಂಕ್‌ ಖಾತೆಗೆ ವೇತನ ಜಮಾ ಮಾಡುವಂತೆಯೂ ಸೂಚಿಸಿದೆ. ಆದರೆ, ಈವರೆಗೂ ವೇತನ ಬಿಡುಗಡೆ ಮಾಡಿಲ್ಲ. ವೇತನವನ್ನೇ ನಂಬಿ ಬದುಕು ಸಾಗಿಸುತ್ತಿರುವ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

‘ಸರ್ಕಾರದ ಆದೇಶದಂತೆ ಗ್ರಾ.ಪಂ ನೌಕರರ ವಿವರವನ್ನು ಪಂಚ ತಂತ್ರಾಂಶದಲ್ಲಿ ಅಡಕ ಮಾಡಿ ಬಾಕಿ ವೇತನ ಪಾವತಿಸಬೇಕು. ಅನುಮೋದನೆ ಆಗದಿರುವ ಸಿಬ್ಬಂದಿಗೆ ಶೀಘ್ರವೇ ಅನುಮೋದನೆ ನೀಡಬೇಕು. ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ವಿಮಾ ಸವಲತ್ತು ಕಲ್ಪಿಸಬೇಕು. ಕುಟುಂಬ ಸದಸ್ಯರಲ್ಲಿ ಅರ್ಹರೊಬ್ಬರಿಗೆ ಕೆಲಸ ನೀಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

‘ನಗರಾಭಿವೃದ್ಧಿ ಇಲಾಖೆಯಲ್ಲಿ ಇರುವಂತೆ ಗ್ರಾ.ಪಂ ನೌಕರರಿಗೂ ಸೇವಾ ನಿಯಮಾವಳಿ ರೂಪಿಸಬೇಕು. ಎಂ.ಎಸ್.ಸ್ವಾಮಿ ಸಮಿತಿ ವರದಿ ಶಿಫಾರಸಿನಂತೆ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಹುದ್ದೆ ಸೃಷ್ಟಿಸಬೇಕು. ನಿವೃತ್ತ ನೌಕರರಿಗೂ ಗ್ರಾಚ್ಯುಟಿ ಸವಲತ್ತು ನೀಡಬೇಕು. ಬಡ್ತಿ ನಿರೀಕ್ಷೆಯಲ್ಲಿರುವ ಪಂಪ್ ಆಪರೇಟರ್ ಹಾಗೂ ಇತರ ಸಿಬ್ಬಂದಿಗೆ ಕರ ಸಂಗ್ರಹಗಾರರ ಹುದ್ದೆಗೆ ಬಡ್ತಿ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.