ADVERTISEMENT

ಮಾ.5ಕ್ಕೆ ಗೋಲ್ಡನ್ ಡೇರಿಗೆ ಗುದ್ದಲಿ ಪೂಜೆ

ಪತ್ರಿಕಾಗೋಷ್ಠಿಯಲ್ಲಿ ಕೋಚಿಮುಲ್‌ ಅಧ್ಯಕ್ಷ ನಂಜೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:23 IST
Last Updated 23 ಫೆಬ್ರುವರಿ 2019, 13:23 IST

ಕೋಲಾರ: ‘ಒಕ್ಕೂಟದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಂ.ವಿ.ಕೃಷ್ಣಪ್ಪ ಗೋಲ್ಡನ್ ಡೇರಿ ಕಾಮಗಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾ.5ರಂದು ಬೆಳಿಗ್ಗೆ 10.-30ಕ್ಕೆ ಗುದ್ದಲಿ ಪೂಜೆ ನೆರವೇರಿಸುತ್ತಾರೆ’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೀರ ಕ್ರಾಂತಿ ಮೂಲಕ ಹೈನೋದ್ಯಮ ಬೆಳೆಯಲು ಕಾರಣರಾದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 10 ಲಕ್ಷ ಲೀಟರ್ ಹಾಲು ಶೇಖರಣಾ ಸಾಮರ್ಥ್ಯದ ಡೇರಿ ನಿರ್ಮಿಸಲಾಗುತ್ತಿದೆ. ಡೇರಿಯ ಅಂದಾಜು ವೆಚ್ಚ ₹ 130 ಕೋಟಿ’ ಎಂದರು.

‘ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್‌, ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ, ಅವಳ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಶಿವಶಂಕರರೆಡ್ಡಿ, ಸಂಸದರಾದ ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ ಹಾಗೂ ಎಲ್ಲಾ ಶಾಸಕರು ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಒಕ್ಕೂಟ ಆರಂಭವಾಗಿ 28 ವರ್ಷವಾಗಿದ್ದು, ಯಂತ್ರೋಪಕರಣಗಳ ಸಾಮರ್ಥ್ಯ ಕ್ಷಿಣಿಸಿದೆ. ಹಳೆ ಡೇರಿಯ ಜತೆಗೆ ಸಾಂದರ್ಭಿಕ ಅಗತ್ಯತೆಯಂತೆ 4 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಿಕೊಂಡಿದ್ದರೂ ಪ್ರತಿನಿತ್ಯ 6.50 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಲಾಗುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚುತ್ತಿರುವುದರಿಂದ ಗೋಲ್ಡನ್ ಡೇರಿ ನಿರ್ಮಾಣ ಅಗತ್ಯವಾಗಿದೆ’ ಎಂದು ವಿವರಿಸಿದರು.

ಪಶು ಆಹಾರ ಘಟಕ: ‘ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಾಗದಿದ್ದರೆ ಮಾ.10ರೊಳಗೆ ಚಿಕ್ಕಬಳ್ಳಾಪುರದ ಮೆಗಾ ಡೇರಿ ಆವರಣದಲ್ಲಿ ಆಡಳಿತ ಭವನ ಉದ್ಘಾಟಿಸಲಾಗುತ್ತದೆ. ಜತೆಗೆ ಶಿಢ್ಲಘಟ್ಟದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಪಶು ಆಹಾರ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಗೋಲ್ಡನ್ ಡೇರಿ ಮತ್ತು ಪಶು ಆಹಾರ ಘಟಕದ ಕಾಮಗಾರಿಯನ್ನು 2 ವರ್ಷದೊಳಗೆ ಪೂರ್ಣಗೊಳಿಸುವ ಗುರಿಯಿದೆ. ಪಶು ಆಹಾರ ಘಟಕ ಕಾರ್ಯಾರಂಭ ಮಾಡಿದರೆ ಅವಳಿ ಜಿಲ್ಲೆಯಲ್ಲಿ ಪಶು ಆಹಾರ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಣಸಚೌಡನಹಳ್ಳಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಕಾಟನ್ ಬಾಕ್ಸ್ ತಯಾರಿಕಾ ಘಟಕ ನನೆಗುದಿಗೆ ಬೀಳಲು ಬಿಡುವುದಿಲ್ಲ. ಕೋಚಿಮುಲ್ ಮತ್ತು ಕೆಎಂಎಫ್ ಸಹಯೋಗದಲ್ಲಿ ಘಟಕ ಸ್ಥಾಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪಶು ಆಹಾರ ಬೇಡಿಕೆ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಿಂಗಳಿಗೆ 6 ಸಾವಿರ ಟನ್ ಪಶು ಆಹಾರದ ಬೇಡಿಕೆಯಿದೆ. ಇದರಲ್ಲಿ 5 ಸಾವಿರ ಟನ್ ಪಶು ಆಹಾರವನ್ನು ಬೆಂಗಳೂರಿನ ರಾಜಾನುಕುಂಟೆ, ತುಮಕೂರು ಜಿಲ್ಲೆಯ ಗುಬ್ಬಿ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಘಟಕಗಳಿಂದ ತರಿಸಿಕೊಳ್ಳಲಾಗುತ್ತಿದೆ. ಹೊರ ರಾಜ್ಯಗಳಿಂದ 1 ಸಾವಿರ ಟನ್‍ ತರಿಸಲಾಗುತ್ತಿದೆ’ ಎಂದು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಹೇಳಿದರು.

ಕೋಚಿಮುಲ್ ನಿರ್ದೇಶಕರಾದ ಬೈರಾರೆಡ್ಡಿ, ಆರ್‌.ರಾಮಕೃಷ್ಣೇಗೌಡ, ಜಯಸಿಂಹ ಕೃಷ್ಣಪ್ಪ, ಮುನಿಯಪ್ಪ, ವ್ಯವಸ್ಥಾಪಕ ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.