ADVERTISEMENT

ಕೋಲಾರ ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ: ಕೊಳದ ತುಂಬಾ ಪಿಒಪಿ ಗಣಪನ ವಿಗ್ರಹ!

ಕೆ.ಓಂಕಾರ ಮೂರ್ತಿ
Published 7 ಆಗಸ್ಟ್ 2025, 8:14 IST
Last Updated 7 ಆಗಸ್ಟ್ 2025, 8:14 IST
ಕೋಲಾರ ನಗರದ ಕೋಲಾರಮ್ಮ ಕೆರೆ ಪಕ್ಕ ನಿರ್ಮಿಸಿರುವ ಕೃತಕ ಕೊಳದ ತುಂಬಾ ಪಿಒಪಿ ಗಣಪನ ವಿಗ್ರಹಗಳು
ಕೋಲಾರ ನಗರದ ಕೋಲಾರಮ್ಮ ಕೆರೆ ಪಕ್ಕ ನಿರ್ಮಿಸಿರುವ ಕೃತಕ ಕೊಳದ ತುಂಬಾ ಪಿಒಪಿ ಗಣಪನ ವಿಗ್ರಹಗಳು   

ಕೋಲಾರ: ಮತ್ತೊಂದು ಗಣೇಶ ಚತುರ್ಥಿ ಸ್ವಾಗತಿಸಲು ಸಿದ್ಧತೆ ಪ್ರಾರಂಭವಾಗಿದ್ದರೆ, ಕಳೆದ ಹಬ್ಬದ ಸಂದರ್ಭದಲ್ಲಿ ವಿಸರ್ಜನೆ ಮಾಡಲಾಗಿದ್ದ ಗಣಪನ ಮೂರ್ತಿಗಳು ಕರಗದೆ ಕೋಲಾರ ನಗರಸಭೆ ಕೊಳದಲ್ಲಿ ತುಂಬಿಕೊಂಡಿವೆ.

ನಿರ್ಬಂಧವಿದ್ದರೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣಪತಿ ವಿಗ್ರಹ ಮಾರಾಟಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಿರುವುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ. ಅಲ್ಲದೆ, ಪರಿಸರಕ್ಕೆ ಹಾನಿ ಉಂಟು ಮಾಡುವ ಇಂಥ ವಿಗ್ರಹಗಳನ್ನು  ವರ್ಷವಾದರೂ ತೆರವುಗೊಳಿಸದೆ ಇರುವುದು ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ನಗರ ಪ್ರದೇಶದಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಗ್ರಹಗಳನ್ನು ಒಂದೆಡೆ ವಿಸರ್ಜನೆಗೆಂದು ನಗರಸಭೆಯಿಂದ ಸುವರ್ಣ ಕನ್ನಡ ಭವನ ಬಳಿ ಕೃತಕ ಕೊಳ ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿಯೇ ವಿಸರ್ಜನೆ ಮಾಡಲಾಗುತ್ತದೆ. ಮಣ್ಣಿನ ಗಣೇಶ ವಿಗ್ರಹಗಳು ಕರಗಿವೆ. ಆದರೆ, ಪಿಒಪಿ ಗಣೇಶನ ವಿಗ್ರಹಗಳು ವರ್ಷವಾದರೂ ಕರಗಿಲ್ಲ.

ADVERTISEMENT

ಪಕ್ಕದಲ್ಲೇ ಕೋಲಾರಮ್ಮ ಕೆರೆ ಇದ್ದು, ಏರಿ ಮೇಲೂ ಪಿಒಪಿ ಗಣಪತಿ ವಿಗ್ರಹಗಳನ್ನು ಎಸೆಯಲಾಗಿದೆ. ಇವು ಪರಿಸರಕ್ಕೆ ಮಾರಕವಾಗುವ ಆತಂಕ ತಂದೊಡ್ಡಿವೆ. ಹಲವಾರು ವಿಗ್ರಹಗಳು ಕೆರೆ ಒಡಲನ್ನು ಸೇರಿರುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

‘ಪಿಒಪಿ ಗಣೇಶ ವಿಗ್ರಹ ವಿಸರ್ಜನೆಯಿಂದ ಇಡೀ ಪರಿಸರ ಕಲುಷಿತವಾಗುತ್ತಿದೆ. ರಾಸಾಯನಿಕ ಅಂಶಗಳಿರುವ ಇಂಥ ವಿಗ್ರಹಗಳನ್ನು ಕೆರೆ, ಕುಂಟೆಗಳಲ್ಲಿ ಮುಳುಗಿಸುವುದರಿಂದ ನೀರು ವಿಷಪೂರಿತವಾಗುತ್ತದೆ. ಕ್ರಿಮಿಕೀಟಗಳಿಂದ ಹಿಡಿದು ಯಾವುದೇ ಜೀವಿ ಬದುಕುಳಿಯುವುದಿಲ್ಲ. ಇಡೀ ಪರಿಸರಕ್ಕೆ ಮಾರಕವಾಗುತ್ತದೆ’ ಎಂದಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಕೊಳ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವವರು ಗಣೇಶ ವಿಗ್ರಹಗಳನ್ನು ತೆರವು ಕೂಡ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸುಮಾರು 20ಕ್ಕೂ ಹೆಚ್ಚು ಪಿಒಪಿ ವಿಗ್ರಹಗಳು ಕೊಳದಲ್ಲಿವೆ. ಇವೆಲ್ಲಾ ಕಳೆದ ಬಾರಿ ಗಣೇಶನ ಹಬ್ಬದಲ್ಲಿ ವಿಸರ್ಜಿಸಿದ್ದ ಪಿಒಪಿ ಗಣೇಶನ ಮೂರ್ತಿಗಳಾಗಿವೆ.

ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಬಳಕೆ ನಿಷೇಧ ಮಾಡಿ ಜಿಲ್ಲಾಡಳಿತ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ಗಣೇಶ ಚತುರ್ಥಿ ವೇಳೆ ಆದೇಶ ಹೊರಡಿಸುತ್ತವೆ. ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡುತ್ತಾ ಬಂದಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಾದ ವಿಗ್ರಹಗಳು ಜಿಲ್ಲೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಕಾರ್ಯನಿರ್ವಹಿಸಲು ಹಿಂದಿನ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಆದರೆ, ಆ ಆದೇಶ ಉಲ್ಲಂಘಿಸಿ ಪಿಒಪಿ ಮೂರ್ತಿ ಮಾರಾಟ ಹಾಗೂ ವಿಸರ್ಜನೆ ಮಾಡುವುದು ಕಂಡುಬರುತ್ತಿದೆ. ಸಕ್ಷಮ ಪ್ರಾಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.

‘ಸಾಮಾನ್ಯವಾಗಿ ರಾತ್ರಿ ವೇಳೆ ಗಣೇಶನ ವಿಗ್ರಹ ವಿಸರ್ಜಿಸುತ್ತಾರೆ. ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ವ್ಯತ್ಯಾಸ ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ, ನಮ್ಮ ಗಮನಕ್ಕೆ ಬಂದಿಲ್ಲ. ಈ ಬಾರಿ ಎಚ್ಚರ ವಹಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

‘ಪಿಒಪಿ ಗಣೇಶ ಮೂರ್ತಿಗಳನ್ನು ಕೊಳದಲ್ಲಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿರುವುದು, ವರ್ಷವಾದರೂ ಅವುಗಳನ್ನು ತೆರವುಗೊಳಿಸದೆ ಹಾಗೆ ಬಿಟ್ಟಿರುವುದರ ಹಿಂದೆ ನಗರಸಭೆ ನಿರ್ಲಕ್ಷ್ಯವಿದೆ.‌ ಪಿಒಪಿ ಗಣಪನ ಮೂರ್ತಿ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಗಣೇಶ ಹಬ್ಬದಲ್ಲಿ ಹೆಚ್ಚಿನ ನಿಗಾ ಇಡಲಾಗುವುದು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರ ರಾಜು ‘ಪ್ರಜಾವಾಣಿ’ಗೆ ‌ತಿಳಿಸಿದರು.

ನಗರಸಭೆ ನಿರ್ಮಿಸಿರುವ ಕೊಳದಲ್ಲಿ ಪಿಒಪಿ ಗಣಪ ಮೂರ್ತಿಗಳು ಇರುವುದು ನನ್ನ ಗಮನಕ್ಕೂ ಬಂದಿದೆ. ಪೌರಾಯುಕ್ತ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ತೆರವು ಮಾಡಿಸುತ್ತೇನೆ
ರಾಜು ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.