ಕೋಲಾರ: ಅಪೌಷ್ಟಿಕ ಮುಕ್ತ ಕೋಲಾರ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣತೊಡಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ 8ನೇ ವರ್ಷದ ಪೋಷಣ್ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ್ ಅಭಿಯಾನದ ಮುಖ್ಯ ಗುರಿ ಅಪೌಷ್ಟಿಕತೆ ಹೋಗಲಾಡಿಸಿ, ಪೌಷ್ಟಿಕತೆ ಹೆಚ್ಚಿಸುವುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಟೇಶ್ ಆರ್., ‘ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರೂ ಆಗಿರುವುದರಿಂದ ಮಕ್ಕಳ ಆರೈಕೆಯಲ್ಲಿ ಹೆಚ್ಚು ನಿಗಾ ಇಡಬೇಕು. ಪೌಷ್ಟಿಕತೆ ಕಾಪಾಡಿಕೊಂಡಲ್ಲಿ ಪೌಷ್ಟಿಕ ರಾಷ್ಟ್ರ ಕಟ್ಟಬೇಕು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಪೋಷಣ್ ಅಭಿಯಾನದಲ್ಲಿ ಅಪೌಷ್ಟಿಕತೆಯಿಂದ ಉಂಟಾಗುವ ಕುಂಠಿತ ಬೆಳವಣಿಗೆ, ರಕ್ತಹೀನತೆ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ವಿವರಿಸಿದರು.
ಪೋಷಣ್ ಮಾಸಾಚರಣೆಯ ಪ್ರಯುಕ್ತ ಅತಿಯಾದ ತೂಕ ನಿಯಂತ್ರಣ, ಪೋಷಣ್ ಭಿ ಪಡಾಯ್ ಭಿ, ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವುದು, ಶಿಶು ಮತ್ತು ಬಾಲ್ಯ ಪೋಷಣೆ ಮತ್ತು ಪುರುಷರ ಪಾಲ್ಗೊಳ್ಳುವಿಕೆಯಂಥ 5 ಚಟುವಟಿಕೆಗಳನ್ನು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಹೋಬಳಿ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸೆ.12 ರಿಂದ ಅ.11ವರೆಗೆ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸೀಮಂತ, ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪೋಷಣ್ ಅಭಿಯಾನ ಭಿತ್ತಿಪತ್ರಗಳನ್ನು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಮೀಕ್ಷೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ವಕೀಲರ ಸಂಘ ಅಧ್ಯಕ್ಷ ಎಲ್.ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್, ಜಿಲ್ಲಾ ಆಯುಷ್ï ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಾಗರತ್ನ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಶೀಲಾ, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಮಾಲೂರು ಮುಳಬಾಗಿಲು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕಿಯರು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ನಿರ್ದೇಶನ ಪೋಷಣ್ ಮಾಸಾಚರಣೆಯಡಿ ಸೆ.12 ರಿಂದ ಅ.11ವರೆಗೆ ವಿವಿಧ ಚಟುವಟಿಕೆ ಸೀಮಂತ, ಅನ್ನಪ್ರಾಶನ ಕಾರ್ಯಕ್ರಮ ಆಯೋಜನೆ
ತೀವ್ರದಿಂದ ಸಾಧಾರಣ ಅಪೌಷ್ಟಿಕತೆ ಕಡೆಗೆ 2018-19 ರಲ್ಲಿ 106 ತೀವ್ರ ಅಪೌಷ್ಟಿಕ ಮಕ್ಕಳಿದ್ದರು. ಪ್ರಸ್ತುತ ಆಗಸ್ಟ್ ತಿಂಗಳಾಂತ್ಯಕ್ಕೆ 54 ಮಕ್ಕಳಿದ್ದು 52 ತೀವ್ರ ಅಪೌಷ್ಟಿಕ ಮಕ್ಕಳು ಸಾಧಾರಣ ಅಪೌಷ್ಟಿಕತೆಗೆ ಬಂದು ಸುಧಾರಣೆಗೊಂಡಿರುತ್ತದೆ ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು. ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಫೋನ್ ವಿತರಿಸಲಾಗಿದೆ. ಮೊಬೈಲ್ ಮೂಲಕ ಫಲಾನುಭವಿಗಳ ಹಾಜರಾತಿ ಬಿಸಿಯೂಟ ನೋಂದಣಿ ಮತ್ತು ತೂಕ ಮತ್ತು ಎತ್ತರವನ್ನು ಟ್ರ್ಯಾಕಿಂಗ್ ಮಾಡಲಾಗುತ್ತಿದೆ. ಪೋಷಣ್ ಟ್ರ್ಯಾಕರ್‌ನ ದಿನನಿತ್ಯದ ನಿರ್ವಹಣೆಯಲ್ಲಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.