ADVERTISEMENT

ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 15:48 IST
Last Updated 21 ಜನವರಿ 2020, 15:48 IST
ಲಕ್ಷ್ಮೀ
ಲಕ್ಷ್ಮೀ   

ಕೋಲಾರ: ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ಲಕ್ಷ್ಮೀ (17) ಎಂಬ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಸಮ್ಮುಖದಲ್ಲಿ ಮಂಗಳವಾರ ಸಮಾಧಿಯಿಂದ ಯುವತಿಯ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಗದ್ದೆಕಣ್ಣೂರು ಗ್ರಾಮದ ದೇವರಾಜ್ ಎಂಬುವರ ಪುತ್ರಿಯಾದ ಲಕ್ಷ್ಮೀ (ಜ18) ಶನಿವಾರ ಮೃತಪಟ್ಟಿದ್ದರು. ಅವರು ತಾಲ್ಲೂಕಿನ ಕೆಂಬೋಡಿ ಗ್ರಾಮದ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು.

ಶನಿವಾರ ಕಾಲೇಜಿಗೆ ಹೋಗಿದ್ದ ಲಕ್ಷ್ಮೀ ತರಗತಿ ಮುಗಿದ ನಂತರ ಮನೆಗೆ ಹಿಂದಿರುಗಿದ್ದರು. ಬಳಿಕ ಪೋಷಕರು ಲಕ್ಷ್ಮೀಯನ್ನು ಮನೆಯಲ್ಲಿ ಬಿಟ್ಟು ಜಮೀನಿಗೆ ಹೋಗಿದ್ದರು. ಪೋಷಕರು ಜಮೀನಿನಿಂದ ಸಂಜೆ ಮನೆಗೆ ವಾಪಸ್‌ ಬಂದಾಗ ಮಗಳು ಮನೆಯಲ್ಲಿ ಇರಲಿಲ್ಲ. ಸ್ವಲ್ಪ ಸಮಯದಲ್ಲೇ ಮನೆಯ ಸಂಪ್‌ಗೆ ನೀರು ಬಂದಿದ್ದರಿಂದ ದೇವರಾಜ್‌ ಸಂಪ್‌ನ ಮುಚ್ಚಳ ತೆಗೆದಾಗ ಲಕ್ಷ್ಮೀಯ ಶವ ಪತ್ತೆಯಾಗಿತ್ತು.

ADVERTISEMENT

ಇದರಿಂದ ಗಾಬರಿಯಾದ ಪೋಷಕರು ಹತ್ತಿರದ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಮಾತ್ರ ವಿಷಯ ತಿಳಿಸಿ ತರಾತುರಿಯಲ್ಲಿ ಮನೆಯ ಸಮೀಪದ ಜಮೀನಿನಲ್ಲಿ ಮಗಳ ಅಂತ್ಯಸಂಸ್ಕಾರ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ (ಜ.20) ಕೋಲಾರದಿಂದ ಯುವಕನೊಬ್ಬ ಅಭಿ ಎಂದು ಹೇಳಿಕೊಂಡು ಲಕ್ಷ್ಮೀಯ ತಂದೆ ದೇವರಾಜ್‌ರ ಮೊಬೈಲ್‌ಗೆ ಕರೆ ಮಾಡಿ, ತಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ನಿಮ್ಮ ಮಗಳು ಯಾಕೆ ಮೃತಪಟ್ಟಿದ್ದಾಳೆ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು, ಆ ಯುವಕನೇ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಸಂಪ್‌ನಲ್ಲಿ ಶವ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರ ದೂರು ಆಧರಿಸಿ ಪೊಲೀಸರು ತಹಶೀಲ್ದಾರ್‌ ಶೋಭಿತಾ ಅವರ ಸಮ್ಮುಖದಲ್ಲಿ ಲಕ್ಷ್ಮೀಯವರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಶವ ಪರೀಕ್ಷೆ ವರದಿ ಬಂದ ನಂತರ ಸಾವಿನ ಕಾರಣ ಹಾಗೂ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ದೇವರಾಜ್‌ರ ಮೊಬೈಲ್‌ ಕರೆ ಮಾಡಿದ್ದ ಯುವಕನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.