ADVERTISEMENT

ಬಿತ್ತನೆ ಉದ್ದೇಶದ ಆಲೂಗಡ್ಡೆಗೆ ತಿನ್ನುವ ಆಲೂಗಡ್ಡೆ ಮಿಶ್ರಣ: ಕ್ರಿಮಿನಲ್‌ ಪ್ರಕರಣ

ರೈತರ ನೋಂದಣಿ ಕಡ್ಡಾಯ: ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 17:10 IST
Last Updated 6 ಸೆಪ್ಟೆಂಬರ್ 2021, 17:10 IST
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಬಿತ್ತನೆ ಆಲೂಗಡ್ಡೆ ವಿತರಣೆ ಸಂಬಂಧ ಕೋಲಾರದಲ್ಲಿ ಸೋಮವಾರ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದರು
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಬಿತ್ತನೆ ಆಲೂಗಡ್ಡೆ ವಿತರಣೆ ಸಂಬಂಧ ಕೋಲಾರದಲ್ಲಿ ಸೋಮವಾರ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದರು   

ಕೋಲಾರ: ‘ಬಿತ್ತನೆ ಉದ್ದೇಶದ ಆಲೂಗಡ್ಡೆಗೆ ತಿನ್ನುವ ಆಲೂಗಡ್ಡೆ ಮಿಶ್ರಣ ಮಾಡಿ ಮಾರಾಟ ಮಾಡುವ ವರ್ತಕರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಬಿತ್ತನೆ ಆಲೂಗಡ್ಡೆ ವಿತರಣೆ ಸಂಬಂಧ ಇಲ್ಲಿ ಸೋಮವಾರ ತೋಟಗಾರಿಕೆ ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳು, ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಯಾವುದೇ ಕಾರಣಕ್ಕೆ ಬಿತ್ತನೆ ಆಲೂಗಡ್ಡೆಗೆ ತಿನ್ನುವ ಆಲೂಗಡ್ಡೆ ಮಿಶ್ರಣ ಮಾಡಬಾರದು’ ಎಂದು ಹೇಳಿದರು.

‘ಬಿತ್ತನೆ ಆಲೂಗಡ್ಡೆ ಮಾರುವವರ ಬಳಿ ರೈತರ ನೋಂದಣಿ ಕಡ್ಡಾಯವಾಗಿರಬೇಕು. ಆಲೂಗಡ್ಡೆ ಪಡೆಯುವ ರೈತರಿಗೆ ಸೂಕ್ತ ಮಾಹಿತಿಯ ಜತೆಗೆ ಬಿಲ್ ನೀಡಬೇಕು. ಬಿಲ್ ನೀಡದಿದ್ದರೆ ಅಂತಹ ವರ್ತಕರ ಬಗ್ಗೆ ರೈತರು ಮಾಹಿತಿ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಬೆಳಗಾವಿ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಿತ್ತನೆ ಆಲೂಗಡ್ಡೆ ಮಾರಾಟದ ಬೆಲೆ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿ ವಾರ ಮಾಹಿತಿ ಸಂಗ್ರಹಿಸಬೇಕು. ಅಲ್ಲದೇ, ಆ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ರೈತರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 5,980 ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಬಂಗಾರಪೇಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟವಾಗುತ್ತಿದ್ದು, 47 ಮಾರಾಟಗಾರರು ಇದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಮಾಹಿತಿ ನೀಡಿದರು.

‘ಅ.15ರ ನಂತರ ಆಲೂಗಡ್ಡೆ ಬಿತ್ತನೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಹಲವು ರೈತರು ಅವಧಿಗೂ ಮುನ್ನವೇ ಬಿತ್ತನೆ ಮಾಡುತ್ತಿರುವುದರಿಂದ ವಾತಾವರಣಕ್ಕೆ ಹೊಂದಿಕೊಳ್ಳದೆ ಸಮಸ್ಯೆಯಾಗುತ್ತಿದೆ. ಆಲೂಗಡ್ಡೆ ಬಿತ್ತನೆ ಸಂಬಂಧ ಇಲಾಖೆಯಿಂದ ರೈತರಿಗೆ ತಾಂತ್ರಿಕ ನೆರವು ನೀಡುತ್ತೇವೆ’ ಎಂದು ವಿವರಿಸಿದರು.

ಅನುಮತಿ ಪಡೆದಿಲ್ಲ: ‘ಜಿಲ್ಲೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿರುವ ವರ್ತಕರು ತೋಟಗಾರಿಕೆ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಜತೆಗೆ ಬಿತ್ತನೆ ಆಲೂಗಡ್ಡೆಗೆ ಸಂಬಂಧಿಸಿದಂತೆ ಗುಣಮಟ್ಟ ಖಾತ್ರಿಯ ಪ್ರಮಾಣಪತ್ರ ಸಹ ಕೊಡುತ್ತಿಲ್ಲ. ಜಲಂಧರ್‌ನಿಂದ ಆಮದು ಮಾಡಿಕೊಂಡ ಆಲೂಗಡ್ಡೆಯನ್ನು ಪರಿಶೀಲಿಸದೆ ರೈತರಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಗೌಡ ಆರೋಪಿಸಿದರು.

‘ವರ್ತಕರ ಬದಲು ಸರ್ಕಾರದ ವತಿಯಿಂದಲೇ ರೈತರಿಗೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ಪೂರೈಸಬೇಕು. ಆಗ ರೈತರು ಮೋಸ ಹೋಗುವುದು ತಪ್ಪುತ್ತದೆ’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಜಿಲ್ಲಾಡಳಿತದ ವತಿಯಿಂದ ಬಿತ್ತನೆ ಆಲೂಗಡ್ಡೆ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲೇ ಸಿದ್ಧಪಡಿಸಿ: ‘ಪ್ರತಿ ವರ್ಷ ಬೇರೆ ಜಿಲ್ಲೆಗಳಿಂದ ಬಿತ್ತನೆ ಆಲೂಗಡ್ಡೆ ತಂದು ತೊಂದರೆ ಅನುಭವಿಸುವುದಕ್ಕಿಂತ ಜಿಲ್ಲೆಯಲ್ಲೇ ಪ್ರಗತಿಪರ ರೈತರು ಬಿತ್ತನೆ ಆಲೂಗಡ್ಡೆ ಸಿದ್ಧಪಡಿಸುವುದು ಸೂಕ್ತ. ಬೇರೆಯವರಿಗೆ ಕಾಯುವ ಅಗತ್ಯ ಇರುವುದಿಲ್ಲ. ಸ್ಥಳೀಯವಾಗಿ ಬಿತ್ತನೆ ಆಲೂಗಡ್ಡೆ ತಯಾರಿಸುವುದಕ್ಕೆ ರೈತರು ಆಸಕ್ತಿ ತೋರಿದರೆ ತೋಟಗಾರಿಕೆ ಇಲಾಖೆಯು ಸಹಕಾರ, ಸಲಹೆ ನೀಡಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ರೈತ ಮುಖಂಡರಾದ ಗಣೇಶ್‌ಗೌಡ, ಎಂ.ಶ್ರೀನಿವಾಸ್‌, ಟಿ.ಎನ್.ರಾಮೇಗೌಡ, ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.