ಶ್ರೀನಿವಾಸಪುರ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ರಸ್ತೆ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಈ ಭಾಗದಲ್ಲಿ ನಿತ್ಯ ನೂರಾರು ವಾಹನಗಳ ಸಂಚರಿಸುತ್ತವೆ, ಸಾವಿರಾರು ಜನ ಓಡಾಡುತ್ತಾರೆ. ಪ್ರವೇಶ ದ್ವಾರದಲ್ಲೇ ದೊಡ್ಡ ಗುಂಡಿ ಬಿದ್ದು ನೀರು ತುಂಬಿಕೊಂಡಿದ್ದರೂ ಗಮನಿಸುವವರು ಇಲ್ಲವಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹಳ ದಿನಗಳಿಂದ ಇದೇ ಪರಿಸ್ಥಿತಿ ಇದ್ದು, ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿಲ್ಲ ಎಂದು ದೂರಿದ್ದಾರೆ.
ಪಟ್ಟಣದ ಬೆಸ್ಕಾಂ ಇಲಾಖೆಯ ಮುಂಭಾಗದ ರಸ್ತೆಯಲ್ಲೂ ಗುಂಡಿಗಳು ಬಿದ್ದಿದ್ದು, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ನಾಗರಿಕರು ಟೀಕಿಸಿದ್ದಾರೆ.
ನಾಗರಿಕ ವೇದಿಕೆ ಮುಖಂಡ ವೆಂಕಟೇಶ್‍ಗೌಡ ಮಾತನಾಡಿ, ‘ಸರ್ಕಾರ ಕೋಟಿಗಟ್ಟಲೇ ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುತ್ತದೆ. ಆದರೆ, ಸಾರ್ವಜನಿಕರಿಗೆ ಅಗತ್ಯವಾದ ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ತಕ್ಷಣ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿಸಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.