ADVERTISEMENT

21ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 15:48 IST
Last Updated 15 ಜುಲೈ 2019, 15:48 IST

ಕೋಲಾರ: ‘ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜುಲೈ 21ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೂ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯದ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಸಮುದಾಯದಲ್ಲಿನ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಆ ಮಕ್ಕಳ ಸಾಧನೆ ಇತರ ಮಕ್ಕಳಿಗೂ ಪ್ರೇರಣೆಯಾಗಲಿ ಎಂಬ ಕಾರಣಕ್ಕೆ ಸಂಘವು ಹಲವು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ 41 ಮಂದಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ 20 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ನಾಡಪ್ರಭು ಕೆಂಪೇಗೌಡರ 510ನೇ ಜಯಂತಿ ಅದ್ಧೂರಿಯಾಗಿ ನಡೆದಿದೆ. 80 ಪಲ್ಲಕ್ಕಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದವು’ ಎಂದು ವಿವರಿಸಿದರು.

‘ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಸ್ಪಟಿಕಪುರ ಪೀಠಾಧ್ಯಕ್ಷ ನಂಜಾವದೂತ ಸ್ವಾಮೀಜಿ, ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಮಹಾರಾಷ್ಟ್ರ ಸರ್ಕಾರದ ಮಾರುಕಟ್ಟೆ ಇಲಾಖೆ ಕಾರ್ಯದರ್ಶಿಯಾದ ಶ್ರೀನಿವಾಸಪುರ ತಾಲ್ಲೂಕಿನ ಗಾಂಡ್ಲಹಳ್ಳಿಯ ಗೋವಿಂದರಾಜು, ಕೇಂದ್ರ ಇಂಧನ ಇಲಾಖೆ ಸಹ ಕಾರ್ಯದರ್ಶಿ ಕೆ.ಆರ್.ನಂದಿನಿ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ರಾಮಚಂದ್ರೇಗೌಡ, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಅವರನ್ನು ಸನ್ಮಾನಿಸಲಾಗುವುದು’ ಎಂದರು.

ಹಾಸ್ಟೆಲ್ ನಿರ್ಮಾಣ: ‘ವಾಣಿಜ್ಯ ಸಂಕೀರ್ಣ ನಿರ್ಮಿಸಲು, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ವಿಶೇಷವಾಗಿ ಬಡ ವಿದ್ಯಾರ್ಥಿನಿಯರ ಅನುಕೂಲಕ್ಕೆ ಹಾಸ್ಟೆಲ್ ನಿರ್ಮಿಸಲು ಹಾಗೂ ಪ್ರಗತಿಪರ ಕೃಷಿಕರನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಜುಲೈ 23ರಂದು ನಡೆಯುವ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣದ ಬಗ್ಗೆ ಚರ್ಚಿಸಿ 3 ತಿಂಗಳೊಳಗೆ ಭೂಮಿ ಪೂಜೆ ಮಾಡಲು ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಬಿಸಪ್ಪಗೌಡ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ.ಜೆ.ಮೌನಿ, ನಿರ್ದೇಶಕರಾದ ನಾರಾಯಣಸ್ವಾಮಿ, ಕೃಷ್ಣಪ್ಪ, ವೆಂಕಟೇಶಪ್ಪ, ಆ.ಮು.ಲಕ್ಷ್ಮೀನಾರಾಯಣ, ಗೋವಿಂದರಾಜು, ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.