ADVERTISEMENT

ಹಬ್ಬಕ್ಕೂ ಮುನ್ನವೇ ಗೌರಿ–ಗೌರಿಸುತನ ಆಗಮನ

ರಸ್ತೆ ಬದಿಯಲ್ಲಿ ಮೋದಕ ಪ್ರಿಯನ ಕಾರುಬಾರು: ಮೂರ್ತಿ ವಹಿವಾಟು ಜೋರು

ಜೆ.ಆರ್.ಗಿರೀಶ್
Published 8 ಸೆಪ್ಟೆಂಬರ್ 2021, 15:20 IST
Last Updated 8 ಸೆಪ್ಟೆಂಬರ್ 2021, 15:20 IST
ಕೋಲಾರದ ಟಿ.ಚನ್ನಯ್ಯ ರಂಗಮಂದಿರ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಗಣೇಶ ಮೂರ್ತಿಗಳು
ಕೋಲಾರದ ಟಿ.ಚನ್ನಯ್ಯ ರಂಗಮಂದಿರ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಗಣೇಶ ಮೂರ್ತಿಗಳು   

ಕೋಲಾರ: ನಗರದಲ್ಲಿ ಹಬ್ಬಕ್ಕೂ ಮುನ್ನವೇ ಗೌರಿ–ಗೌರಿಸುತನ ಆಗಮನವಾಗಿದೆ. ಪ್ರಮುಖ ರಸ್ತೆಗಳ ಬದಿಯಲ್ಲೆಲ್ಲಾ ಈಗ ಮೋದಕ ಪ್ರಿಯನದೇ ಕಾರುಬಾರು. ಗೌರಿ–ಗಣೇಶ ಹಬ್ಬಕ್ಕೂ ಮುನ್ನವೇ ಎಲ್ಲೆಡೆ ಹಬ್ಬದ ವಾತಾವರಣ ಕಳೆಗಟ್ಟಿದೆ.

ಹಬ್ಬದ ದಿನ ಸಮೀಪಿಸುತ್ತಿರುವಂತೆ ಕಠಾರಿಪಾಳ್ಯ, ಕುಂಬಾರಪೇಟೆಯಲ್ಲಿ ಗೌರಿ–ಗಣೇಶ ಮೂರ್ತಿಗಳ ತಯಾರಿಕೆ ಜೋರಾಗಿದೆ. ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮೂರ್ತಿ ತಯಾರಕರಿಗೆ ಮುಂಗಡ ಹಣ ಕೊಟ್ಟು ಇಷ್ಟದ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಮೂರ್ತಿಗಳ ವಹಿವಾಟು ಜೋರಾಗಿದ್ದು, ಯುವಕರ ಪಡೆಯು ಕೋವಿಡ್‌ ಆತಂಕದ ನಡುವೆಯೂ ವಠಾರಗಳಲ್ಲಿ ಹಾಗೂ ಬೀದಿ ಬದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದೆ. ಪ್ರಮುಖ ಬಡಾವಣೆಗಳಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ಪೆಂಡಾಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ದಂಡೇ ಕಂಡುಬರುತ್ತಿದೆ.

ADVERTISEMENT

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಟೇಕಲ್‌ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಗೌರಿ–ಗಣೇಶ ಮೂರ್ತಿಯ ಅಂಗಡಿಗಳ ಸಾಲೇ ಎದುರಾಗುತ್ತದೆ. ಇಲಿ, ನಂದಿ, ಹಂಸ, ಹುಲಿ, ಸಿಂಹ, ನವಿಲು, ಜಿಂಕೆ, ಹಾವು, ಆನೆ ಮೇಲೆ ಕುಳಿತ ಭಂಗಿಯ ಗಣೇಶ ಮೂರ್ತಿಗಳು ಕಣ್ಮನ ಸೆಳೆಯುತ್ತವೆ. ತಾಂಡವ ನೃತ್ಯ, ದರ್ಬಾರ್‌, ದಶಾವತಾರ ಭಂಗಿಯ, ರಥದ ಮೇಲೆ ಕುಳಿತ ಗಣೇಶ ಮೂರ್ತಿಗಳು ಪ್ರಮುಖ ಆಕರ್ಷಣೆಯಾಗಿವೆ.

ಮೂರ್ತಿಯ ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಕೆಂದಟ್ಟಿ, ಅರಹಳ್ಳಿ, ಶಿವಾರಪಟ್ಟಣ ಮತ್ತು ಬೆಂಗಳೂರಿನ ಕಲ್ಕೆರೆ, ಅಗರ, ಹೊರಮಾವು ಕೆರೆಯ ಮಣ್ಣನ್ನು ಬಳಸಿ ಮೂರ್ತಿ ತಯಾರಿಸಲಾಗಿದೆ. ನಗರದಿಂದ ಚಿಕ್ಕಬಳ್ಳಾಪುರ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಹಾಸನ, ಚಿತ್ರದುರ್ಗ, ರಾಮನಗರ ಜಿಲ್ಲೆಗೆ ಮೂರ್ತಿಗಳನ್ನು ಖರೀದಿಸಿಕೊಂಡು ಹೋಗಲಾಗುತ್ತಿದೆ.

ಚಂದಾ ವಸೂಲಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡದಂತೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಬಡಾವಣೆಗಳಲ್ಲಿ ಚಂದಾ ವಸೂಲಿ ಎಗ್ಗಿಲ್ಲದೆ ನಡೆದಿದೆ. ಮಕ್ಕಳ ದಂಡು ಚಂದಾ ವಸೂಲಿಗಾಗಿ ಮನೆ ಮನೆ ಅಲೆಯುತ್ತಿದೆ. ಮತ್ತೊಂದೆಡೆ ಯುವಕರ ಪಡೆ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳ ಬಳಿ ದೇಣಿಗೆ ಸಂಗ್ರಹಿಸುತ್ತಿದೆ.

ಪಿಒಪಿ ನಿರ್ಬಂಧ: ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವಂತೆ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದೆ. ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಿದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.

ಆದರೂ ಅಧಿಕಾರಿಗಳ ಕಣ್ತಪ್ಪಿಸಿ ಹಲವೆಡೆ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಲಾಗುತ್ತಿದೆ. ಪಿಒಪಿ ಮೂರ್ತಿಗಳು ಮಣ್ಣಿನ ಮೂರ್ತಿಗಳಿಗಿಂತ ನೋಡಲು ಹೆಚ್ಚು ಆಕರ್ಷಕವಾಗಿವೆ. ಈ ಮೂರ್ತಿಗಳ ಬೆಲೆ ದುಬಾರಿಯಾದರೂ ಸಾಗಾಟಕ್ಕೆ ಅನುಕೂಲವೆಂಬ ಕಾರಣಕ್ಕೆ ಜನ ಪಿಒಪಿ ಮೂರ್ತಿಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆದರೆ, ಪೂಜೆಗೆ ಮಣ್ಣಿನ ಮೂರ್ತಿಗಳೇ ಶ್ರೇಷ್ಠವೆಂದು ನಂಬಿರುವವರು ಪಿಒಪಿ ಮೂರ್ತಿಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ತೊಟ್ಟಿ ನಿರ್ಮಾಣ: ನಗರಸಭೆಯು ಗೌರಿ–ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗೆ ಕುರುಬರಪೇಟೆಯ ಬಳಿಯ ಕೋಲಾರಮ್ಮ ಕೆರೆ ಅಂಗಳದಲ್ಲಿ ದೊಡ್ಡ ತೊಟ್ಟಿ ನಿರ್ಮಾಣ ಮಾಡಿದೆ. ಈ ತೊಟ್ಟಿಯನ್ನು ಸ್ವಚ್ಛಗೊಳಿಸಿ ಬಳಿಕ ಬಣ್ಣ ಬಳಿಯಲಾಗುತ್ತದೆ. ಆ ನಂತರ ತೊಟ್ಟಿಗೆ ನೀರು ತುಂಬಿಸಲಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪೊಲೀಸ್‌ ಠಾಣೆ ಮತ್ತು ನಗರಸಭೆಯ ಅನುಮತಿ ಪಡೆಯಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ. ಜತೆಗೆ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ಅಡ್ಡಿಯಾಗದಂತೆ ಪೆಂಡಾಲ್‌ ನಿರ್ಮಿಸಬೇಕೆಂದು ಸೂಚನೆ ನೀಡಿದ್ದಾರೆ. ಪೆಂಡಾಲ್‌ಗಳಲ್ಲಿ ಅಗ್ನಿ ಅನಾಹುತ ಹಾಗೂ ಅಪರಾಧ ಚಟುವಟಿಕೆಗಳ ತಡೆಗೆ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.